Home ಟಾಪ್ ಸುದ್ದಿಗಳು ‘ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರನ್ನು ವಾರಿಯರ್ಸ್ ಎಂದು ಪರಿಗಣಿಸಿ, 50 ಲಕ್ಷ ರೂ ಪರಿಹಾರ ನೀಡಿ’...

‘ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರನ್ನು ವಾರಿಯರ್ಸ್ ಎಂದು ಪರಿಗಣಿಸಿ, 50 ಲಕ್ಷ ರೂ ಪರಿಹಾರ ನೀಡಿ’ : ಕುಮಾರಸ್ವಾಮಿ ಒತ್ತಾಯ

ಬೆಂಗಳೂರು : ಚುನಾವಣೆ ಕರ್ತವ್ಯದಲ್ಲಿ ದುಡಿದ ಮತ್ತು ವಿದ್ಯಾಗಮ ಯೋಜನೆ ಮೂಲಕ ಪಾಠ ಮಾಡಿದ ಕಲ್ಯಾಣ ಕರ್ನಾಟಕದ 145 ಶಿಕ್ಷಕರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಳಿದ ಕಡೆ ಮೃತಪಟ್ಟವರ ಲೆಕ್ಕ ಸಿಗುತ್ತಿಲ್ಲ. ಮೃತಪಟ್ಟ ಎಲ್ಲ ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಕನಿಷ್ಠ 50 ಲಕ್ಷ ರೂ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 145ಕ್ಕೂ ಹೆಚ್ಚು ಶಿಕ್ಷಕರು ಹೈದರಾಬಾದ್-ಕರ್ನಾಟಕದಲ್ಲಿ ಅಂದರೆ ಕಲ್ಯಾಣ ಕರ್ನಾಟಕದಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರ ಕೊಟ್ಟ ಆದೇಶ ಪಾಲಿಸಿ ರಾಜ್ಯದಾದ್ಯಂತ ಇನ್ನೂ ಹಲವು ಶಿಕ್ಷಕರ ಪ್ರಾಣ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಬೇಕು. ಅವರನ್ನು ಚುನಾವಣೆ ಹಾಗೂ ಮತ್ಯಾವುದೋ ಕಾರಣಕ್ಕೆ ನಿಯೋಜಿಸಿದ ಸರ್ಕಾರವೇ ಈ ಸಾವುಗಳ ಸಂಪೂರ್ಣ ಹೊಣೆ ಹೊರಬೇಕು. ಇನ್ನೂ ಸಾವಿರಾರು ಶಿಕ್ಷಕರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಭವಿಷ್ಯ ಕಟ್ಟುವ ಶಿಕ್ಷಕರ ಬಗ್ಗೆ ಸರ್ಕಾರದ ಉಡಾಫೆ ಹಾಗೂ ದಿವ್ಯ ನಿರ್ಲಕ್ಷ್ಯ ಧೋರಣೆ ಬಗ್ಗೆ ನನ್ನ ಧಿಕ್ಕಾರವಿದೆ. ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೊರೋನಾ ವಾರಿಯರ್ಸ್ ಎಂದು ಬಾಯಿಮಾತಿನಲ್ಲಿ ಹೇಳಿದ ಸರ್ಕಾರ ಪ್ರತಿ ತಿಂಗಳು ಆಶಾ ಕಾರ್ಯಕರ್ತೆಯರಿಗೆ ಸಕಾಲಕ್ಕೆ ಗೌರವಧನ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ದುಡಿದವರಿಗೆ ಗೌರವಧನ ಕೊಡಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ 1250 ಕೋಟಿ ರೂಗಳ ಪ್ಯಾಕೇಜನ್ನು ಅನುಷ್ಠಾನಗೊಳಿಸುತ್ತದೆ ಎಂಬುದು ಭ್ರಮೆ ಅಲ್ಲದೆ ಮತ್ತೇನು? ಎಂದು ಅವರು ಪ್ರಶ್ನಿಸಿದ್ದಾರೆ.

ಕೊರೋನಾ ವಾರಿಯರ್ಸ್ ಎಂದು ಹಣೆಪಟ್ಟಿ ಹಚ್ಚಿದ ಸರ್ಕಾರ ಒಬ್ಬ ಆಶಾ ಕಾರ್ಯಕರ್ತೆಗೆ ಮಾತ್ರ 50 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಉಳಿದ 15 ಮಂದಿಗೆ ಪರಿಹಾರ ಕೊಟ್ಟಿಲ್ಲ. ಸರ್ಕಾರದ ಇಂತಹ ಬೇಜವಾಬ್ದಾರಿಗಳಿಂದ ಬೇಸತ್ತು ಆಶಾ ಕಾರ್ಯಕರ್ತೆಯರು ದೂರ ಉಳಿದರೆ ಕೋವಿಡ್ 19 ನಿಯಂತ್ರಣ ಕೈ ಮೀರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version