ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವರ್ಷಕ್ಕೊಮ್ಮೆ ಜಾತ್ರೆ ಮುಗಿದ ಮೇಲೆ ಅಲ್ಲಿನ ಅಂಗಡಿಗಳು ಸ್ಟಾಕ್ ಕ್ಲಿಯರೆನ್ಸ್ ಸೇಲ್ ಬೋರ್ಡ್ ಹಾಕಿ ರಿಯಾಯಿತಿ ದರದ ಘೋಷಣೆ ಮಾಡುವ ರೀತಿ ಇದೆ ಎಂದು ಲೇವಡಿ ಮಾಡಿದ್ದಾರೆ.
ಮೂರು ತಿಂಗಳಲ್ಲಿ ಚುನಾವಣೆ ಇಟ್ಟುಕೊಂಡು ಶಾಸ್ತ್ರಕ್ಕೆ ಮಂಡಿಸಿರುವ ರಾಜ್ಯ ಮುಂಗಡ ಪತ್ರ ರಾಜ್ಯದ ಜನರ ಸಂಕಷ್ಟಗಳನ್ನು ಪರಿಹಾರ ಮಾಡಲು ಮೂರು ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.
ಮೂರು ವರ್ಷಗಳಲ್ಲಿ ಬಿಜೆಪಿ ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದೆ. ಕೈಗಾರಿಕೆ, ಮೂಲಸೌಕರ್ಯ, ಸಾರಿಗೆ, ಶಿಕ್ಷಣ, ಕೃಷಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಬಸವಳಿದಿದೆ. ಕೇಂದ್ರದ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ದುಸ್ಥಿತಿ ಬಂದಿದೆ. ಕೇಂದ್ರ ಸರಕಾರವು ರಾಜ್ಯಕ್ಕೆ ಅನುದಾನವನ್ನು ಭಿಕ್ಷೆಯಂತೆ ಹಾಕುತ್ತಿದೆ. ಇನ್ನು ಈ ಬಜೆಟ್ಟಿನ ಹಣೆಬರಹಕ್ಕೆ ದಿಕ್ಕೆಲ್ಲಿ ಎಂದು ಮಾಜಿ ಮುಖ್ಯಮಂತ್ರಿ ಅವರು ಕಟುವಾಗಿ ಟೀಕಿಸಿದ್ದಾರೆ.
ಬೊಮ್ಮಾಯಿ ಬಜೆಟ್ ಗೆ ಯಾವುದೇ ಮಹತ್ವ ಇಲ್ಲ. ಇದು ಅತ್ಯಂತ ನೀರಸ, ಮಾತ್ರವಲ್ಲ ನಿರುಪಯುಕ್ತ ಕೂಡ. ಚುನಾವಣೆ ನಂತರ ಬರುವ ಸರಕಾರ ಮಂಡಿಸುವ ಬಜೆಟ್ ಜಾರಿಗೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎನ್ನುವುದು ಎಲ್ಲ ಕನ್ನಡಿಗರಿಗೂ ಗೊತ್ತಿರುವ ಸಂಗತಿ ಎಂದು ಅವರು ತಿಳಿಸಿದ್ದಾರೆ.