►ಗುಜರಾತಿನಲ್ಲಿ 1,61,000 ಮಂದಿಗೆ ಲಸಿಕೆ
ಬೆಂಗಳೂರು : ಕೋವಿಡ್ ನಿಯಂತ್ರಣಕ್ಕಾಗಿ 18-44 ವಯೋಮಾನದವರಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನ ಮೇ 1ರಿಂದ ಆರಂಭವಾಗಿದ್ದು, ಕರ್ನಾಟಕದಲ್ಲಿ ಕೇವಲ 3475 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಇದು ಕೇಂದ್ರದ ತಾರತಮ್ಯವೋ, ರಾಜ್ಯದ ವೈಫಲ್ಯವೋ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ದೇಶದಲ್ಲಿ ಮಂಗಳವಾರದ ಹೊತ್ತಿಗೆ 6 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಗುಜರಾತ್ನಲ್ಲಿ 1,61,000 ಜನರಿಗೆ ಲಸಿಕೆ ಹಾಕಲಾಗಿದೆ. ಕರ್ನಾಟಕ ಮತ್ತು ಕನ್ನಡಿಗರಿಗೆ ತಾರತಮ್ಯವಾಗುತ್ತಿರುವುದು, ಗುಜರಾತ್ ಮೇಲೆ ಅತಿಯಾದ ಪ್ರೀತಿ ತೋರುತ್ತಿರುವುದು ಕೇಂದ್ರದ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳಿಂದಲೇ ಬಹಿರಂಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರ ಸರಕಾರದಿಂದ ಆಗುತ್ತಿರುವ ಈ ತಾರತಮ್ಯ ಮನುಷ್ಯತ್ವ ವಿರೋಧಿ. ಕನ್ನಡಿಗರಿಗಾಗಿ ಸೊಲ್ಲೆತ್ತದ ರಾಜ್ಯ ಸರ್ಕಾರದ ಪರಮ ವೈಫಲ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಲಸಿಕೆ ನೀಡುತ್ತಿಲ್ಲವೇ? ರಾಜ್ಯಕ್ಕೆ ಏನು ಬೇಕೋ ಅದನ್ನು ಕೇಳಿ ಪಡೆಯಲು ರಾಜ್ಯ ಸರ್ಕಾರಕ್ಕೆ ಶಕ್ತಿ ಇಲ್ಲವೇ? ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಪ್ರಶ್ನಿಸಲು ನಮ್ಮವರಿಗೆ ಬಾಯಿಲ್ಲವೇ? ಇದೆಲ್ಲ ಗಮನಿಸುತ್ತಿದ್ದರೆ, ಕನ್ನಡಿಗರನ್ನು ಈ ಸರ್ಕಾರಗಳು ಹಣೆಬರಹಕ್ಕೆ ಬಿಟ್ಟಂತೆ ಕಾಣುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರ, ಸಂಸದರು ಮೊದಲು ಈ ತಾರತಮ್ಯದ ವಿರುದ್ಧ ಹೋರಾಡಬೇಕು. ಜನರ ಜೀವ ಉಳಿಸಲು ಬೇಕಾಗಿರುವುದನ್ನು ಕೇಂದ್ರ ಸರಕಾರದಿಂದ ಕೇಳಿ ಪಡೆದುಕೊಳ್ಳಬೇಕಾದದ್ದು ಈ ಹೊತ್ತಿನ ಅಗತ್ಯ. ಲಸಿಕೆ ಅಭಿಯಾನದಲ್ಲಿ ಆಗುತ್ತಿರುವ ಈ ತಾರತಮ್ಯ, ವೈಫಲ್ಯಗಳನ್ನು ರಾಜ್ಯದ ಜನರೂ ಪ್ರಶ್ನೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ಅಪಾಯದ ದಿನಗಳು ಮುಂದಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.