ರಾಜಕೀಯವನ್ನು ಭ್ರಷ್ಟೋಧ್ಯಮವನ್ನಾಗಿ ಮಾಡಿಕೊಂಡ ಕೀರ್ತಿ ಕುಮಾರಸ್ವಾಮಿಗೆ ಸಲ್ಲುತ್ತದೆ: ಕಾಂಗ್ರೆಸ್

Prasthutha|

ಬೆಂಗಳೂರು: ರಾಜಕೀಯವನ್ನು ಭ್ರಷ್ಟೋಧ್ಯಮವನ್ನಾಗಿ ಮಾಡಿಕೊಂಡ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಜರಿದಿದೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರು ಹಣ ಕೊಟ್ಟು ಮತ ಪಡೆದಿದ್ದಾರೆ, ಹಣ ಪಡೆದು ಮತ ನೀಡುತ್ತಾರೆ, ಕುಮಾರಸ್ವಾಮಿಯವರು ಹಣ ವಸೂಲಿ ಮಾಡಿ ಟಿಕೆಟ್ ನೀಡುತ್ತಾರೆ. ಇದನ್ನು ಅವರೇ ಒಪ್ಪಿಕೊಂಡಿದ್ದು. ಫ್ಯಾಮಿಲಿ ಟ್ರಸ್ಟ್ ನಂತಿರುವ ಜೆಡಿಎಸ್ ಪಕ್ಷಕ್ಕಾಗಿ ಪಡೆದ ಹಣ ಕುಮಾರಸ್ವಾಮಿಯವರ ಜೇಬಿಗೆ ಹೋಗುತ್ತದೆಯಲ್ಲವೇ ಎಂದು ಹೇಳಿದೆ

ರಾಜಕೀಯವನ್ನು ಭ್ರಷ್ಟೋಧ್ಯಮವನ್ನಾಗಿ ಮಾಡಿಕೊಂಡ ಕೀರ್ತಿ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಟಿಕೆಟ್ ಅಕ್ಷಾಂಕ್ಷಿಗಳಲ್ಲೇ ಸೂಟ್ ಕೇಸ್ ಪಡೆದ ತಾವು ಅಧಿಕಾರದಲ್ಲಿ ಕಂಟೈನರ್ ನಲ್ಲಿ ವಸೂಲಿ ಮಾಡಿಲ್ಲವೇ? ಎಂದು ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ.

- Advertisement -

ಯತೀಂದ್ರ ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯ ನಡುವೆ ನಡೆದ ಆರೋಪಿತ ವರ್ಗಾವಣೆ ಧಂದೆಯ ವಿಡಿಯೋ ವೈರಲ್ ಆಗಿರುವ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಲ್ಲಿ ಪೋಸ್ಟರ್ ಅಂಟಿಸುವ ಗೀಳು ಹುಟ್ಟಿಕೊಂಡಿದೆ, ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಮ್ ಪೋಸ್ಟರ್ ಅಂಟಿಸಿ ಪ್ರಚಾರ ನಡೆಸಿದ್ದರು ಎಂದು ಹೇಳಿದರು. ಅಲ್ಲದೆ, ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಗೆ ರಾಜ್ಯದ ಕಾಂಗ್ರೆಸ್ ನಾಯಕರು ಸೂಟ್ ಕೇಸ್ ಗಳಲ್ಲಿ ಹಣ ತುಂಬಿಕೊಂಡು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧವೂ ಪೊಸ್ಟರ್ ಗಳನ್ನು ಅಂಟಿಸಬೇಕು ತಾನೇ ಎಂದು ಕೇಳಿದ್ದರು.

“ಕುಮಾರಸ್ವಾಮಿಯವರ ಸ್ಥಿತಿ “ತಾನು ಕಳ್ಳ ಪರರ ನಂಬ” ಎಂಬಂತಿದೆ. ತಾನು ಮಾಡಿದ್ದನ್ನೇ ಬೇರೆಯವರೂ ಮಾಡುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. “ರಾಜಕಾರಣದಲ್ಲಿ ಅಧಿಕಾರ, ಹಣ ಬಹುಮುಖ್ಯ, ನಾನು ಶುದ್ಧನಲ್ಲ, ಪ್ರಾಮಾಣಿಕನಲ್ಲ” ಎಂದು ತಪ್ಪೊಪ್ಪಿಕೊಂಡಿರುವ ಕುಮಾರಸ್ವಾಮಿ ಅವರ ಪ್ರಾಮಾಣಿಕತೆಗೆ ಕಾಂಗ್ರೆಸ್ ಅಭಿನಂದಿಸುತ್ತದೆ. ಆದರೆ ತನ್ನಂತೆ ಬೇರೆಯವರೂ ಭ್ರಷ್ಟರು ಎಂದು ಕಲ್ಪಿಸಿಕೊಳ್ಳುವುದನ್ನು ಬಿಟ್ಟು, ತಮ್ಮ ಭ್ರಷ್ಟಾಚಾರಕ್ಕೆ, ಲೂಟಿಗೆ ಪ್ರಾಯಶ್ಚಿತ್ತದ ಕೆಲಸಗಳನ್ನು ಮಾಡಲಿ” ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

“ಪೆನ್ ಡ್ರೈವ್ ನಾಟಕ ಠುಸ್ ಆಯ್ತು, ಸೋಫಾ ಸೆಟ್ ಸುಳ್ಳು ಬಯಲಾಯ್ತು, ಈಗ ವರ್ಗಾವಣೆ ವಿಡಿಯೋ ಎನ್ನುವ ಮತ್ತೊಂದು ಸುಳ್ಳಿನ ನಾಟಕ ಶುರು ಮಾಡಿದ್ದಾರೆ. ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು” ಎಂದು ಕಾಂಗ್ರೆಸ್ ಕುಟುಕಿದೆ.

“ರಾಜ್ಯದ ಜನತೆ ಈಗಾಗಲೇ ಪೆನ್ ಡ್ರೈವ್ ಸ್ವಾಮಿಯ ಮಾನವನ್ನು ಮೂರು ಕಾಸಿಗೆ ಕಳೆದಿದ್ದಾರೆ, ಆದರೂ ನೌಟಂಕಿ ನಾಟಕ ಮುಂದುವರೆಸಿರುವ ಅವರನ್ನು ಕರ್ನಾಟಕದ ರಾಜಕಾರಣದ ತಿಪ್ಪೆಗುಂಡಿ ಎಂದು ಪರಿಗಣಿಸುವ ಕಾಲ ದೂರವಿಲ್ಲ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.



Join Whatsapp