Home ಟಾಪ್ ಸುದ್ದಿಗಳು ‘ಕುಲವಂ ಪೇಳ್ವದು ನಾಲ್ಗೆ’: ಸಿ.ಟಿ.ರವಿಗೆ ರಾಮಲಿಂಗಾರೆಡ್ಡಿ ತಿರುಗೇಟು

‘ಕುಲವಂ ಪೇಳ್ವದು ನಾಲ್ಗೆ’: ಸಿ.ಟಿ.ರವಿಗೆ ರಾಮಲಿಂಗಾರೆಡ್ಡಿ ತಿರುಗೇಟು

ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯ ಪೂರ್ವಜರಾದ ಆರ್ ಎಸ್ ಎಸ್ ಹಾಗೂ ವಿಶ್ವಹಿಂದೂ ಪರಿಷತ್ತಿನ ನ ಯಾವುದೇ ನಾಯಕರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲ್ಲಿಲ್ಲ. ಕಡೇ ಪಕ್ಷ ಅವರ ಮನೆ ನಾಯಿಯೂ ದೇಶಕ್ಕಾಗಿ ಪ್ರಾಣ ಬಿಟ್ಟಿಲ್ಲ ಎಂದು ಹೇಳಿದ್ದಾರೆ. ಖರ್ಗೆ ಅವರು ಬಿಜೆಪಿ ನಾಯಕರನ್ನಾಗಲಿ, ಅವರ ಪೂರ್ವಜರಾರನ್ನು ನಾಯಿ ಎಂದು ಉಲ್ಲೇಖಿಸಿಲ್ಲ. ಆದರೆ ಈ ಹೇಳಿಕೆಯನ್ನು ಬಿಜೆಪಿ ನಾಯಕರು ತಿರುಚಿ ಖರ್ಗೆ ಅವರ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಕಾಂಗ್ರೆಸ್ ನಾಯಕರನ್ನು ನಾಯಿಗೆ ಹೋಲಿಸಿ ಮಾತನಾಡಿದ್ದಾರೆ. ‘ಕುಲವಂ ಪೇಳ್ವದು ನಾಲ್ಗೆ’ ಎಂಬ ಗಾದೆ ಮಾತಿದೆ. ಒಬ್ಬ ವ್ಯಕ್ತಿಯ ಸಂಸ್ಕೃತಿ, ಸಂಸ್ಕಾರ ಅವನ ಮಾತಿನಿಂದ ಗೊತ್ತಾಗುತ್ತದೆ. ಅದೇ ರೀತಿ ಬಿಜೆಪಿಯವರ ಸಂಸ್ಕೃತಿಯನ್ನು ಆ ಪಕ್ಷದ ನಾಯಕರ ಮಾತುಗಳೇ ಬಿಂಬಿಸುತ್ತಿವೆ ಎಂದು ತಿರುಗೇಟು ನೀಡಿದರು.


ಕಾಂಗ್ರೆಸ್ ಮುಖಂಡರನ್ನು ನಾಯಿಗಳಿಗೆ ಹೋಲಿಸಿರುವ ಬಿಜೆಪಿ ಮುಖಂಡರನ್ನು ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ. ನಾವಂತೂ ಅವರನ್ನು ನಾಯಿಗೆ ಹೋಲಿಸುವುದಿಲ್ಲ. ಕಾರಣ ಅತ್ಯಂತ ನೀಯತ್ತಿನ ಪ್ರಾಣಿ ನಾಯಿ. ಹೀಗಾಗಿ ಅವರನ್ನು ಬೇರೆ ಪ್ರಾಣಿಗೆ ಹೋಲಿಸಬೇಕು. ಇವರಿಗೆ ಯಾವ ಪ್ರಾಣಿ ಸೂಕ್ತ ಎಂದು ನಂತರದ ದಿನಗಳಲ್ಲಿ ಹೇಳುತ್ತಾನೆ ಎಂದು ವ್ಯಂಗ್ಯವಾಡಿದರು.


ಭಾವನಾತ್ಮಕ ಮಾತು, ವಿಚಾರಗಳಿಂದ ಬಿಜೆಪಿ ಸರಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಬಹುದು ಎಂದು ಭಾವಿಸಿದ್ದರೆ ಇವರಿಗಿಂತ ಮೂರ್ಖರು ಯಾರೂ ಇಲ್ಲ. ಇವರ ಪಾಪದ ಕೊಡ ತುಂಬಿದೆ. ಅದಕ್ಕೆ ಸದ್ಯದಲ್ಲೇ ತಕ್ಕ ಬೆಲೆ ತೆರುತ್ತೀರಿ. ಜಾನ್ ಎಫ್ ಕೆನಡಿ ಹೇಳಿರುವಂತೆ ಕೆಲವೊಮ್ಮೆ ಮೂರ್ಖರು ಒಂದೆಡೆ ಸೇರುವುದರಿಂದಲೂ ಬಹುಮತ ಇರುತ್ತದಂತೆ. ಈ ಗಾದೆ ಮಾತು ಬಿಜೆಪಿಯವರಿಗೆ ಸೂಕ್ತವಾಗುತ್ತದೆ ಎಂದರು.


ಸ್ವಾತಂತ್ರ್ಯ ಹೋರಾಟದಲ್ಲಿ ಸಹಸ್ರಾರು ಕಾಂಗ್ರೆಸ್ ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ. ಆಗ ಬಿಜೆಪಿ ಪೂರ್ವಜರಾದ ಆರ್ ಎಸ್ ಎಸ್ ಹಾಗೂ ವಿಶ್ವಹಿಂದೂ ಪರಿಷತ್ತಿನ ನಾಯಕರು ಬ್ರಿಟೀಷರ ಗುಲಾಮರಾಗಿದ್ದರು ಎಂಬುದು ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನ ಸಾರಾಂಶ. ಇದರಲ್ಲಿ ತಪ್ಪೇನಿದೆ? ಅವರ ಮಾತು 100 ಕ್ಕೆ 100 ರಷ್ಟು ಸತ್ಯ. ಬಿಜೆಪಿಯ ಪೂರ್ವಜರಾದ ಆರ್ ಎಸ್ ಎಸ್ ಹಾಗೂ ವಿಶ್ವಹಿಂದೂ ಪರಿಷತ್ತಿನ ನಾಯಕರಲ್ಲಿ ಯಾರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರಾ? ಜೈಲಿಗೆ ಹೋಗಿದ್ದಾರಾ? ಹೇಳಿ, ಈ ಬಗ್ಗೆ ಒಂದೇ ಒಂದು ಉದಾಹರಣೆ ಕೊಡಿ ಎಂದು ರಾಮಲಿಂಗಾ ರೆಡ್ಡಿ ಸವಾಲು ಹಾಕಿದರು.


ಸಾರ್ವಕರ್ ಅವರೊಬ್ಬರು ಜೈಲಿಗೆ ಹೋಗಿದ್ದರು. ಇದು ಎಷ್ಟು ನಿಜವೋ, ಅದೇ ರೀತಿ ಸಾರ್ವಕರ್ ಅವರು ಕ್ಷಮಾಪಣಾ ಪತ್ರ ನೀಡಿ ಇನ್ನುಮುಂದೆ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಬಿಡುಗಡೆಯಾಗಿದ್ದು ಅಷ್ಟೇ ನಿಜ. ಬ್ರಿಟಿಷರಿಗೆ ಮೇಲಿಂದ ಮೇಲೆ ಕ್ಷಮಾಪಣೆ ಪತ್ರ ಬರೆದು, ಅವರ ಗುಲಾಮರಾಗಿದ್ದ ವ್ಯಕ್ತಿ ಬಿಜೆಪಿಯವರಿಗೆ ಸ್ಫೂರ್ತಿಯಾಗಿದ್ದಾರೆ. ಹಿಂದುಗಳನ್ನು ಬ್ರಿಟಿಷರ ಸೈನ್ಯ ಸೇರುವಂತೆ ಒತ್ತಡ ಹಾಕಿದವರು ಇವರ ಆರಾಧ್ಯ ದೈವವಾಗಿದ್ದಾರೆ. ಪರಿಶಿಷ್ಟರು, ಹಿಂದುಳಿದವರು, ಮುಸ್ಲಿಮರ ಕೈಗೆ ಅಧಿಕಾರ ಕೊಡುವುದಿದ್ದರೆ ಅಂತಹ ಸ್ವಾತಂತ್ರ್ಯವೇ ನಮಗೆ ಬೇಡ, ಬೇಕಿದ್ದರೆ ಜೀವನ ಪರ್ಯಂತ ನಿಮ್ಮ ಗುಲಾಮರಾಗಿರಲು ಸಿದ್ಧ ಎಂದು ಬ್ರಿಟಿಷರ ಕೈಕಾಲು ಹಿಡಿದವರು ಬಿಜೆಪಿಯವರಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಇಂತಹವರು ನಮಗೆ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಇವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದು ಬಿಜೆಪಿ ವಿರುದ್ಧ ರೆಡ್ಡಿ ಹರಿಹಾಯ್ದರು.


ಈ ದೇಶದ ಪಿತಾಮಹ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ಆರೆಸ್ಸೆಸ್’ನ ನಾಥುರಾಮ್ ಘೋಡ್ಸೆ ನಿಮ್ಮ ದೇವರಾಗಿದ್ದಾರೆ. ಅಂತಹದ್ದರಲ್ಲಿ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಏನು ಅಂತಾ ಕೇಳಿರುವುದರಲ್ಲಿ ತಪ್ಪೇನಿದೆ? ಅದನ್ನು ಬಿಟ್ಟು ಬಿಜೆಪಿ ನಾಯಕರು ಸೋನಿಯಾ ಗಾಂಧಿ ಅವರನ್ನು ಇಟಲಿಯವರು ಅಂತಾ ಜರಿಯುವುದರಲ್ಲಿ ಅರ್ಥವೇನಿದೆ? ಹೌದು, ಸೋನಿಯಾ ಗಾಂಧಿ ಅವರು ಹುಟ್ಟಿದ್ದು, ಅವರ ಮೂಲ ಇಟಲಿಯೇ, ಅವರು ರಾಜೀವ್ ಗಾಂಧಿ ಅವರನ್ನು ಮದುವೆಯಾದ ದಿನವೇ ಆಕೆ ಭಾರತೀಯ ಹೆಣ್ಣಾದರು. ಬೇರೆ ದೇಶದವರನ್ನು ಮದುವೆಯಾಗಿ ನಮ್ಮವರು ಆ ದೇಶದ ಪ್ರಜೆಯಾಗಿದ್ದಾರೆ. ನಮ್ಮ ದೇಶಕ್ಕೆ ಬೇರೆ ದೇಶದ ಹೆಣ್ಣು ಮದುವೆಯಾಗಿ ಭಾರತೀಯರಾಗಿ ಬದುಕುತ್ತಿದ್ದಾರೆ ಎಂದು ಹೇಳಿದರು.


ಕೈಗೆ ಬಂದ ಪ್ರಧಾನಿ ಹುದ್ದೆಯನ್ನೇ ಬಿಟ್ಟುಕೊಟ್ಟ ತ್ಯಾಗಮಾತೆ. ಮಾತೆತ್ತಿದರೆ ಭಾರತೀಯ ಸಂಸ್ಕೃತಿ ಅನ್ನುವ ಬಿಜೆಪಿಗರಿಗೆ ಕನಿಷ್ಠ ಜ್ಞಾನವೂ ಇಲ್ಲ. ನಮ್ಮಲ್ಲಿ ಮದುವೆಯಾದ ಬಳಿಕ ಗಂಡನ ಮನೆಯೇ ಹೆಣ್ಣಿನ ಮನೆಯಾಗುತ್ತದೆ. ಅಪ್ಪಟ ಭಾರತೀಯರಾಗಿ ನಮ್ಮ ಸಂವಿಧಾನದ ಮೌಲ್ಯಗಳನ್ನು ಗೌರವಿಸುತ್ತಾ, ಇಲ್ಲಿನ ಜನರ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.
ರಿಶಿ ಸುನಾಕ್ ಅವರು ಬ್ರಿಟನ್ ಪ್ರಧಾನಿ ಆದಾಗ ನಾವೆಲ್ಲರೂ ಸಂತೋಷಪಟ್ಟಿದ್ದೇವೆ. ರಿಶಿ ಸುನಾಕ್ ಅವರು ಬ್ರಿಟನ್ ಪೌರತ್ವ ಪಡೆದು ಅಲ್ಲಿನ ನಾಯಕರಾಗಿದ್ದಾರೆ. ಇದು ನಾವೆಲ್ಲರೂ ಸಂತೋಷಪಡುವ ವಿಚಾರ. ಅವರನ್ನು ಅಲ್ಲಿನ ಜನ ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲಿ ಸೋನಿಯಾ ಗಾಂಧಿ ಅವರ ವಿಚಾರದಲ್ಲಿ ಬಿಜೆಪಿಯವರಿಗೇಕೆ ಸಂಕಟ. ನಿಮ್ಮ ಮನೆಗಳಿಗೆ ಬೇರೆ ಮನೆಯಿಂದ ಬಂದ ಹೆಣ್ಣನ್ನು ಇದೇ ರೀತಿ ನೋಡುತ್ತೀರಾ? ಇದೇನಾ ನಿಮ್ಮ ಸಂಸ್ಕೃತಿ? ನಿಮ್ಮ ಸಂಸ್ಕಾರ? ಯೋಗ್ಯತೆ? ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಟೀಕಾಪ್ರಹಾರ ನಡೆಸಿದರು.


ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಬೇರೆ, ಸ್ವಾತಂತ್ರ್ಯ ನಂತರದ ಕಾಂಗ್ರೆಸ್ ಬೇರೆ ಎನ್ನುವ ಬಿಜೆಪಿಯವರು ಈ ದೇಶಕ್ಕೆ ಕಾಂಗ್ರೆಸ್ ಕೊಡುಗೆಯನ್ನು ಒಪ್ಪಿಕೊಳ್ಳಬೇಕಲ್ಲವೇ? ತ್ಯಾಗ, ಬಲಿದಾನಗಳ ಮೂಲಕ ಈ ದೇಶಕ್ಕೆ ಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟದ್ದು ನಿಜವಲ್ಲವೇ? ಸ್ವಾತಂತ್ರ್ಯ ಬಂದಾಗ ಈ ದೇಶವನ್ನು ಕಡುಬಡತನ, ಅನಕ್ಷರತೆ, ಜಾತಿ, ಧರ್ಮ ಸಂಘರ್ಷ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳು ಕಿತ್ತು ತಿನ್ನುತ್ತಿದ್ದವು. ನೆಹರೂ ಅವರು ಆಣೆಕಟ್ಟುಗಳು ನವಭಾರತದ ದೇವಾಲಯ ಎಂದು ಸಾವಿರಾರು ಆಣೆಕಟ್ಟೆ ಕಟ್ಟಿದರು. ಬಿಜೆಪಿಯವರು ಒಂದು ಆಣೆಕಟ್ಟು ಕಟ್ಟಲಿಲ್ಲ. ಇಸ್ರೋ, ಎಚ್ಎಎಲ್, BHEL, IIM, IIT ಸೇರಿದಂತೆ ಅನೇಕ ಸಾರ್ವಜನಿಕ ಉದ್ದಿಮೆ ಸ್ಥಾಪಿಸಿದರು. ಕಾಂಗ್ರೆಸ್ ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರುವುದು ಇವರ ಸಾಧನೆ. ದೇಶ ಹಾಗೂ ರಾಜ್ಯದಲ್ಲಿ ನಿಮ್ಮ ಸಾಧನೆ ಏನು? ನೆಹರೂ ಅವರು ವಿಶ್ವಕ್ಕೆ ಮಾದರಿಯಾಗುವಂತಹ ವಿದೇಶಾಂಗ ನೀತಿ ಕೊಟ್ಟರು. ಇಂದು ಅದೇ ನೀತಿಯಿಂದಲೇ ನಿಮ್ಮ ನಾಯಕರು ವಿಶ್ವಗುರುವಂತೆ ಫೋಸ್ ಕೊಡುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.


ಕೋವಿಡ್ ಮತ್ತೆ ಹೆಚ್ಚಾಗುತ್ತಿದೆ ಎಂದು ಭಾರತ್ ಜೋಡೋ ಯಾತ್ರೆಗೆ ಅಡ್ಡಿ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ಈ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ತೀರ್ಮಾನ ಮಾಡುತ್ತಾರೆ. ಅವರಿಗೆ ಕಾಂಗ್ರೆಸ್ ಎಲ್ಲಿ ಹೋರಾಟ ಮಾಡುತ್ತದೋ ಅಲ್ಲಿ ಕೋವಿಡ್ ಕಾಣುತ್ತದೆ. ರಾಜ್ಯದಲ್ಲಿ ವಿಧಾನಮಂಡಲ ಕಲಾಪ ಮಾಡುವಾಗ, ಬಿಜೆಪಿ ಜನ ಸಂಕಲ್ಪ ಯಾತ್ರೆ ಮಾಡುವಾಗ, ಬಿಜೆಪಿ ಹಾಗೂ ಪ್ರಧಾನಮಂತ್ರಿಗಳ ಕಾರ್ಯಕ್ರಮ ಇರುವ ಕಡೆಗಳಲ್ಲಿ ಕೋವಿಡ್ ಇರುವುದಿಲ್ಲ. ಕೋವಿಡ್ ನಿಂದ ಸತ್ತವರಿಗೆ ಪರಿಹಾರ ವಿಚಾರವಾಗಿ ನಾನು ಈ ಹಿಂದೆ ಹಲವು ಬಾರಿ ಹೇಳಿದ್ದೇನೆ. 40 ಬೇರೆ ಕಾಯಿಲೆ ಇರುವವರು ಕೋವಿಡ್ ಸೋಂಕಿನಿಂದ ಸತ್ತರೂ ಅವರಿಗೆ ಕೋವಿಡ್ ಸಾವು ಎಂದು ಪರಿಗಣಿಸಿಲ್ಲ. ಹೀಗಾಗಿ ಕೋವಿಡ್ ನಿಂದ ಸತ್ತವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ರಾಜ್ಯದಲ್ಲಿ 35-40 ಸಾವಿರ ಜನ ಸತ್ತಿದ್ದಾರೆ ಎಂದು ತಿಳಿಸಿದ್ದಾರೆ’ ಎಂದು ಉತ್ತರಿಸಿದರು.


ಗಂಭೀರ ಚರ್ಚೆ ಹೊರತಾಗಿ ಇಂತಹ ನಿಂದನೆ ಚರ್ಚೆಗಳು ಯಾಕೆ ನಡೆಯುತ್ತಿವೆ ಎಂದು ಕೇಳಿದಾಗ, ‘ನಾವು ಜನರ ಕೆಲಸ ಮಾಡಲು ಆಯ್ಕೆಯಾಗಿದ್ದೇವೆ. ಬಿಜೆಪಿಯವರು ಜನರ ಕೆಲಸ ಮಾಡುತ್ತಿದ್ದಾರೆಯೇ? ಜನರಪರ ಕೆಸ ಮಾಡುವುದನ್ನು ಬಿಟ್ಟು ಇಂತಹ ಹೇಳಿಕೆ ನೀಡಿದರೆ ನಾವು ಸುಮ್ಮನೆ ಕೂರಲು ಸಾಧ್ಯವೇ? ಇಂತಹ ವಿಚಾರ ಮಾತನಾಡದಂತೆ ನೀವು ಅವರಿಗೆ ಹೇಳಿ. ಅವರು ಹೇಳಿದನ್ನೆಲ್ಲ ನೀವು ಪ್ರಕಟಿಸುತ್ತೀರಿ. ಅದಕ್ಕೆ ಅವರು ಈ ರೀತಿ ಮಾತನಾಡುತ್ತಾರೆ. ಮಾಧ್ಯಮದವರು ಛೀಮಾರಿ ಹಾಕಿದರೆ ಈ ರೀತಿ ಮಾತನಾಡುವುದನ್ನು ನಿಲ್ಲಿಸುತ್ತಾರೆ. ಸಂಸ್ಕೃತಿ, ನಾಗರೀಕತೆ ಇರುವವರು ಈ ಭಾಷೆ ಬಳಸುತ್ತಾರಾ? ಇದಕ್ಕಿಂತ ಕೆಟ್ಟ ಪದ ಬಳಸಿ ಮಾತನಾಡಲು ನಮಗೆ ಬರುವುದಿಲ್ಲವೇ? ಆದರೆ ನಾವು ಮಾತನಾಡುವುದಿಲ್ಲ. ಅದು ನಮ್ಮ ಸಂಸ್ಕೃತಿ ಅಲ್ಲ. ನಮ್ಮ ಪಕ್ಷ ಅದನ್ನು ಹೇಳಿಕೊಟ್ಟಿಲ್ಲ’ ಎಂದು ತಿಳಿಸಿದರು.


ಪಕ್ಷದ ಟಿಕೆಟ್ ಪಟ್ಟಿ ಯಾವಾಗ ಎಂದು ಕೇಳಿದಾಗ, ‘ಚುನಾವಣಾ ಸಮಿತಿ ರಚನೆ ಮಾಡಲಾಗಿದೆ. ಜನವರಿ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು’ ಎಂದರು.
ನಿಮ್ಮ ಪಕ್ಷದಲ್ಲಿ ಪೈಪೋಟಿ ಹೆಚ್ಚಾಗಿದೆಯಲ್ಲವೇ ಎಂದು ಕೇಳಿದಾಗ, ‘ನಮ್ಮದು ದೊಡ್ಡ ಪಕ್ಷ. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಬಿಜೆಪಿ ಸೋಲುವುದು ನಿಶ್ಚಿತವಾಗಿದ್ದು ಹೀಗಾಗಿ ಅಲ್ಲಿ ಆಕಾಂಕ್ಷಿಗಳು ಕಡಿಮೆ ಇದ್ದಾರೆ’ ಎಂದರು.

Join Whatsapp
Exit mobile version