Home ಟಾಪ್ ಸುದ್ದಿಗಳು ಇದೀಗ ಸಾರಿಗೆ ನೌಕರರ ಪ್ರತಿಭಟನೆಯ ಸರದಿ | ರಸ್ತೆಗಿಳಿಯದ ಬಸ್ ಗಳು; ಪ್ರಯಾಣಿಕರ ಪರದಾಟ; ...

ಇದೀಗ ಸಾರಿಗೆ ನೌಕರರ ಪ್ರತಿಭಟನೆಯ ಸರದಿ | ರಸ್ತೆಗಿಳಿಯದ ಬಸ್ ಗಳು; ಪ್ರಯಾಣಿಕರ ಪರದಾಟ; ಮುಷ್ಕರ ಕೈಬಿಡಲು ಸಿಎಂ ಮನವಿ

ಬೆಂಗಳೂರು : ತಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ನೌಕರರು ನಿನ್ನೆ ನಡೆಸಿದ ಪ್ರತಿಭಟನೆಯ ಮುಂದುವರಿದ ಭಾಗವಾಗಿ ಹಲವೆಡೆ ಇಂದು ಕೂಡ ಬಸ್ ಗಳು ರಸ್ತೆಗಿಳಿದಿಲ್ಲ. ನಿನ್ನೆ ಪ್ರತಿಭಟನೆ ನಡೆಸಿದ್ದಕ್ಕಾಗಿ ನೌಕರರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ, ಇಂದು ಕೂಡ ನೌಕರರು ಸೇವೆಗೆ ಹಾಜರಾಗಿಲ್ಲ ಎಂದು ವರದಿಯೊಂದು ತಿಳಿಸಿದೆ.

ನಾವು ಸರಕಾರಿ ನೌಕರರೂ ಅಲ್ಲ, ಖಾಸಗಿ ನೌಕರರೂ ಅಲ್ಲ, ಮಧ್ಯದಲ್ಲಿ ನಿಗಮ ಸಂಸ್ಥೆಗಳ ಅಡಿಯಲ್ಲಿ ದುಡಿಯುತ್ತಿದ್ದು ಹೆಚ್ಚಿನ ಸೌಲಭ್ಯಗಳು ದೊರಕುತ್ತಿಲ್ಲ. ಸಂಸ್ಥೆಗೆ ನಷ್ಟವಾದರೆ, ನಮಗೆ ವೇತನ ಸಕಾಲಕ್ಕೆ ನೀಡುವುದಿಲ್ಲ. ಹೀಗಾಗಿ ತಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು. ವಿವಿಧ ರಾಜ್ಯಗಳಲ್ಲಿ ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲೂ ಇದು ಜಾರಿಯಾಗಬೇಕೆಂದು ಒತ್ತಾಯಿಸಿ ನಿನ್ನೆ ಸಾರಿಗೆ ನೌಕರರು ಬೃಹತ್ ಪ್ರತಿಭಟನೆ ನಡೆಸಿದ್ದರು.

ಇನ್ನೊಂದೆಡೆ, ಸಾರಿಗೆ ನೌಕರರ ಮುಷ್ಕರದಿಂದ ಜನಜೀವನಕ್ಕೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ, ನೌಕರರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆ ವಾಪಾಸ್ ಪಡೆಯಬೇಕು. ಸದ್ಯ ಸರಕಾರದ ಪರಿಸ್ಥಿತಿ ಸರಿ ಇಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ನಿಮ್ಮ ಬೇಡಿಕೆ ಈಡೇರಿಸುವುದು ಕಷ್ಟ ಎಂದು ಸಿಎಂ ಹೇಳಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ, ಪ್ರಯಾಣಿಕರು ಕಾದು ಕಾದು ಸುಸ್ತಾಗಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Join Whatsapp
Exit mobile version