Home ಟಾಪ್ ಸುದ್ದಿಗಳು KSRTC ಚಾಲಕ ಆತ್ಮಹತ್ಯೆಗೆ ಯತ್ನ ಪ್ರಕರಣ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಗರಂ

KSRTC ಚಾಲಕ ಆತ್ಮಹತ್ಯೆಗೆ ಯತ್ನ ಪ್ರಕರಣ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಗರಂ

ಮೈಸೂರು: ವರ್ಗಾವಣೆಗೆ ಬೇಸತ್ತು ನಾಗಮಂಗಲದ ಕೆಎಸ್ಆರ್ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಇಂದು (ಜು.06) ಶಾಸಕ ಹೆಚ್.ಡಿ ಕುಮಾರಸ್ವಾಮಿ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.


ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಈ ಬಗ್ಗೆ ಕ್ರಮಕೈಗೊಳ್ಳಲಿ. ತಮ್ಮ ರಾಜಕೀಯ ತೆವಲಿಗೆ ಅಮಾಯಕರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಗದೀಶ್ ಸದ್ಯ ವೆಂಟಿಲೇಟರ್ನಲ್ಲಿ ಇದ್ದಾರೆ. ಸರ್ಕಾರ ಬಂದು ಐವತ್ತು ದಿನ ಆಗಿಲ್ಲ. ವರ್ಗಾವಣೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಜಗದೀಶ್ ಪತ್ನಿ ಪಂಚಾಯತಿ ಸದಸ್ಯರು. ಆಗಲೇ ದ್ವೇಷ ರಾಜಕಾರಣ ಆರಂಭಿಸಿದ್ದಾರೆ. ಊರಿನಲ್ಲಿರುವ ಮಹದೇವ ಎಂಬ ರೌಡಿ ಜಗದೀಶ್ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ. ಈ ಹೆಣ್ಣು ಮಗಳು ಜೆಡಿಎಸ್ ಪಕ್ಷ ಬಿಡುವಂತೆ, ಕಾಂಗ್ರೆಸ್ ಸೇರುವಂತೆ ಒತ್ತಡ ಏರಿದ್ದಾನೆ ಎಂದು ಹೇಳಿದರು. ಮತ್ತೊಂದೆಡೆ ಜಗದೀಶ್ಗೆ ಅಧಿಕಾರಿಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಡೆತ್ ನೋಟ್ನಲ್ಲಿ ಜಗದೀಶ್ ಅವರು ಸ್ಪಷ್ಟವಾಗಿ ಬರೆದಿದ್ದಾರೆ. ಸಚಿವರ ಆದೇಶ ಇದೆ ಒತ್ತಡ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿ. ಮಂತ್ರಿ ಸ್ಥಾನ ಏನು ಶಾಶ್ವತನಾ? ಘಟನೆ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಇನ್ನೂ ವ್ಯಕ್ತಿ ಸತ್ತಿಲ್ಲ. ಆ ಕಾರಣಕ್ಕೆ ಎಫ್ ಐ ಆರ್ ಹಾಕಿಲ್ಲ ಅಂತಾರೆ. ಇವರಿಗೆ ಮತ ಹಾಕಿದ್ದು ಜನರ ಜೀವದ ಜೊತೆ ಚೆಲ್ಲಾಟ ಆಡಲು ಅಲ್ಲ ಎಂದು ವಾಗ್ದಾಳಿ ಮಾಡಿದರು.

Join Whatsapp
Exit mobile version