Home ಟಾಪ್ ಸುದ್ದಿಗಳು ಮೆಟ್ರೋ ಪಿಲ್ಲರ್ ಗೆ KSRTC ಬಸ್ ಡಿಕ್ಕಿ: 29 ಮಂದಿಗೆ ಗಾಯ, ನಾಲ್ವರು ಗಂಭೀರ

ಮೆಟ್ರೋ ಪಿಲ್ಲರ್ ಗೆ KSRTC ಬಸ್ ಡಿಕ್ಕಿ: 29 ಮಂದಿಗೆ ಗಾಯ, ನಾಲ್ವರು ಗಂಭೀರ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ ಆರ್ ಟಿಸಿ ಬಸ್ಸೊಂದು ಮೈಸೂರು ರಸ್ತೆಯ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದ ಪರಿಣಾಮ 29 ಮಂದಿ ಪ್ರಯಾಣಿಕರು ಗಾಯಗೊಂಡಿರುವ ದುರ್ಘಟನೆ ಕಳೆದ ಮಧ್ಯರಾತ್ರಿ ನಡೆದಿದೆ.

ಬಸ್ ನಲ್ಲಿದ್ದ 45 ಪ್ರಯಾಣಿಕರ ಪೈಕಿ 29 ಮಂದಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

ಮಡಿಕೇರಿಯಿಂದ ನಗರಕ್ಕೆ ರಾತ್ರಿ 1.30 ರ ಸುಮಾರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್, ಕೆಂಗೇರಿ ಠಾಣೆ ವ್ಯಾಪ್ತಿಯ ಮೈಸೂರು ರಸ್ತೆಯಲ್ಲಿರುವ ಭಾರತ್ ಪೆಟ್ರೋಲಿಯಂ ಬಳಿ ರಸ್ತೆಗುಂಡಿ ತಪ್ಪಿಸಲು ಹೋಗಿ ಬಸ್ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ.

ಮೊದಲು 4 ಅಡಿ ತಡೆಗೋಡೆಗೆ ಗುದ್ದಿ ನಂತರ ಮೆಟ್ರೋ ಪಿಲ್ಲರ್ ಗೆ ಡಿಕ್ಕಿಯಾಗಿರುವ ರಭಸಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 45 ಜನರ ಪೈಕಿ 29 ಜನ ಗಾಯಗೊಂಡಿದ್ದಾರೆ. ಚಾಲಕ ಮಂಜುನಾಥ್ ಮಡಿಕೇರಿಯಿಂದ  ಚನ್ನಪಟ್ಟಣದವರೆಗೆ ಬಸ್ ಚಲಾಯಿಸಿಕೊಂಡು ಬಂದಿದ್ದು ಬಳಿಕ ಚಾಲಕ ಕಂ ನಿರ್ವಾಹಕರಾಗಿದ್ದ ವೆಂಕಟರಮಣ ಅವರಿಗೆ ಚಲಾಯಿಸಲು ಕೊಟ್ಟಿದ್ದರು.

ಘಟನೆಯಿಂದ ಡ್ರೈವರ್ ಬಿ.ಜೆ. ಮಂಜುನಾಥ್ ಹಾಗೂ ಕಂಡೆಕ್ಟರ್ ವೆಂಕಟರಮಣ ಅವರಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದಿಂದಾಗಿ ಬಹುತೇಕರಿಗೆ ಬಾಯಿ, ಹಲ್ಲು, ಮುಖದ ಭಾಗಕ್ಕೆ ಗಾಯಗಳಾಗಿದ್ದು, ಗಾಯಾಳುಗಳೆಲ್ಲ ವಿಕ್ಟೋರಿಯಾ, ಬಿಜಿಎಸ್, ಕೆಂಗೇರಿ ಉಪನಗರದ ಸುಪ್ರ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಹಿಂಬದಿ ಮತ್ತು ಮುಂದೆ ಕೂತಿದ್ದವರಿಗೆ ಹೆಚ್ಚಿನ ಗಾಯಗಳಾಗಿವೆ. ಫಿನಾಕಲ್ ಆಸ್ಪತ್ರೆಯಲ್ಲಿ ಮೂವರು, ಸುಪ್ರದಲ್ಲಿ 12 ಹಾಗೂ ವಿಕ್ಟೋರಿಯಾದಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕರು ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.

Join Whatsapp
Exit mobile version