Home ಟಾಪ್ ಸುದ್ದಿಗಳು ಸೈಕಲ್​ ಟೈರ್​ಗೂ ಟಿಕೆಟ್ ನೀಡಿದ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್!

ಸೈಕಲ್​ ಟೈರ್​ಗೂ ಟಿಕೆಟ್ ನೀಡಿದ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್!

ಹಾವೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ನಿರ್ವಾಹಕರೊಬ್ಬರು ಸೈಕಲ್ ಟಯರ್​​​​ಗೂ ಟಿಕೆಟ್ ನೀಡಿದ ವಿದ್ಯಮಾನ ವರದಿಯಾಗಿದೆ.

ಪ್ರಯಾಣಿಕರೊಬ್ಬರ ಬಳಿ ಇದ್ದ ಸೈಕಲ್ ಟಯರ್​​​​​​ಗೂ ನಿರ್ವಾಹಕರು ಟಿಕೆಟ್ ನೀಡಿದ್ದಾರೆ. ಇದನ್ನು ಪ್ರಶ್ನಿಸಿದಾಗ ನಿಗಮದಿಂದ ಬಂದ ಹೊಸ ಆದೇಶದ ಪ್ರಕಾರ ಟಿಕೆಟ್ ನೀಡಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ರಾಣೆಬೆನ್ನೂರಿನಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಕೆಎಸ್​​ಆರ್​​ಟಿಸಿ ಬಸ್​​ನಲ್ಲಿ ಈ ಘಟನೆ ನಡೆದಿದೆ. ಉಮೇಶ್ ಪಾಟೀಲ್ ಎಂಬವರು ಸರ್ಕಾರಿ ಬಸ್​ನಲ್ಲಿ ರಟ್ಟೀಹಳ್ಳಿಗೆ ಪ್ರಯಾಣಿಸುತ್ತಿದ್ದರು. ಅವರ ಬಳಿ ಇದ್ದ ಸೈಕಲ್ ಟಯರ್​​​ಗೆ ಬಸ್​ ನಿರ್ವಾಹಕ 5 ರೂಪಾಯಿ ಟಿಕೆಟ್ ನೀಡಿದ್ದಾರೆ.

ಶಿಕಾರಿಪುರಕ್ಕೆ ಹೊರಟಿದ್ದ ಕೆಎ 42 ಎಫ್ 1237 ಸಂಖ್ಯೆಯ ಸರ್ಕಾರಿ ಬಸ್​​ನಲ್ಲಿ ಉಮೇಶ್ ಪಾಟೀಲ್ ಸೈಕಲ್ ಟಯರ್​​ ಕೊಂಡೊಯ್ಯುತ್ತಿದ್ದರು. ಅದಕ್ಕೂ ಟಿಕೆಟ್ ನೀಡಿದ ಬಗ್ಗೆ ಅವರು ನಿರ್ವಾಹಕನನ್ನು ಪ್ರಶ್ನಿಸಿದ್ದಾರೆ. ಆಗ, ನಮಗೆ ಮೇಲಧಿಕಾರಿಗಳ ಆದೇಶ ಇದೆ ಎಂದು ಅವರು ಹೇಳಿದ್ದಾರೆ.

ಉಮೇಶ್ ಪಾಟೀಲ್ ಅವರು ತಮ್ಮ ಮಗನ ಜತೆ ರಟ್ಟಿಹಳ್ಳಿಯ ತೊಟಗಂಟಿ ಗ್ರಾಮಕ್ಕೆ ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದರು. ಈ ನಿಲ್ದಾಣಗಳ ನಡುವೆ ಒಬ್ಬ ವ್ಯಕ್ತಿಗೆ ಟಿಕೆಟ್​​​ಗೆ 35 ರೂ. ಇದ್ದು, ಇಬ್ಬರಿಗೆ 70 ರೂ. ಹಾಗೂ ಸೈಕಲ್ ಚಕ್ರಕ್ಕೆ 5 ರೂ. ಸೇರಿಸಿ 75 ರೂ.ನ ಟಿಕೆಟ್ ನೀಡಲಾಗಿದೆ.

ಕೆಎಸ್​ಆರ್​ಟಿಸಿ ನಿಯಮದಲ್ಲೇನಿದೆ?

ಸಾಮಾನ್ಯವಾಗಿ ಕೆಎಸ್​ಆರ್​​ಟಿಸಿ ಬಸ್​​ನಲ್ಲಿ ಪ್ರಯಾಣಿಕರು 30 ಕೆಜಿ ವರೆಗೆ ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿದೆ. ಅದಕ್ಕಿಂತ ಕಡಿಮೆ ತೂಕದ ವಸ್ತುಗಳನ್ನು ಕೊಂಡೊಯ್ಯುವುದಕ್ಕೆ ಪ್ರತ್ಯೇಕ ಹಣ ಪಾವತಿಸಬೇಕಿಲ್ಲ. ಆದಾಗ್ಯೂ, ಉಮೇಶ್ ಪಾಟೀಲ್ ಅವರಿಗೆ ನಿರ್ವಾಹಕರು ಲಗೇಜ್ ಯೂನಿಟ್ ಎಂದು ಟಿಕೆಟ್ ನೀಡಿದ್ದಾರೆ.

Join Whatsapp
Exit mobile version