ಬೆಂಗಳೂರು: ರಾಜ್ಯ ಮೀಸಲು ಪಡೆಯ (ಕೆಎಸ್ ಆರ್ ಪಿ) 4ನೇ ಬೆಟಾಲಿಯನ್ ನಲ್ಲಿ ತರಬೇತಿ ನಿರತ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಡಿವಾಳದಲ್ಲಿ ನಡೆದಿದೆ.
ತರಬೇತಿ ಪಡೆಯುತ್ತಿದ್ದ ಪೇದೆ ಚಿಕ್ಕಪ್ಪ ಅಣ್ಣಪ್ಪ ಅಂಬಿ ಆತ್ಮಹತ್ಯೆಗೆ ಶರಣಾದವರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಪ್ಪ, ಆರು ತಿಂಗಳಿಂದ ಮಡಿವಾಳದಲ್ಲಿರುವ ಕೆಎಸ್ ಆರ್ ಪಿ 4ನೇ ಬೆಟಾಲಿಯನ್ ನಲ್ಲಿ ತರಬೇತಿ ಪಡೆಯುತ್ತಿದ್ದರು. ಸೆ.25ರಂದು ಹೊರಗಡೆ ಹೋದಾಗ ನಾಪತ್ತೆಯಾಗಿದ್ದರು. ಈ ಸಂಬಂಧ ಬೆಟಾಲಿಯನ್ ನ ಹಿರಿಯ ಅಧಿಕಾರಿಗಳು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಆದರೆ ಸೆ.26ರಂದು ಸಂಜೆ ಬೆಟಾಲಿಯನ್ ನ ಬ್ಯಾರಕ್ ಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಅಣ್ಣಪ್ಪನ ಮೃತದೇಹ ಪತ್ತೆಯಾಗಿದೆ. ಸದ್ಯ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಿಗೆ ಆತ್ಮಹತ್ಯೆ ಶಂಕೆ:
ಅಣ್ಣಪ್ಪ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯ ಜತೆ ಕೆಲ ದಿನಗಳ ಹಿಂದಷ್ಟೇ ಜಗಳ ಮಾಡಿಕೊಂಡಿದ್ದರು. ಅದೇ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಜತೆಗೆ ಕೆಲ ತಿಂಗಳಿಂದಲೂ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಆತನ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ಮಡಿವಾಳ ಪೊಲೀಸರು ತಿಳಿಸಿದ್ದಾರೆ