ದುಬೈ ಸೇರಿ ಮೂರು ರಾಷ್ಟ್ರಗಳ ಪ್ರಯಾಣ ನಿಷೇಧ ತೆಗೆದುಹಾಕಿದ ಸೌದಿ ಅರೇಬಿಯಾ

Prasthutha|

ರಿಯಾದ್: ಸೌದಿ ಅರೇಬಿಯಾ ಕೋವಿಡ್ -19 ರ ಪ್ರಯಾಣ ನಿಷೇಧವನ್ನು ತೆಗೆದುಹಾಕಿದ್ದು, ಸೆಪ್ಟೆಂಬರ್ 8 ರಿಂದ ಸೌದಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್, ಅರ್ಜೆಂಟೀನಾ, ದಕ್ಷಿಣ ಆಫ್ರಿಕಾ ದೇಶಗಳ ನಡುವಿನ ಪ್ರಯಾಣವನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಸೌದಿ ಆಂತರಿಕ ಸಚಿವಾಲಯ ತಿಳಿಸಿದೆ.


ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಸಾಂಕ್ರಾಮಿಕ ರೋಗದ ಪರಿಸ್ಥಿತಿಯ ನಿರಂತರ ಮೇಲ್ವಿಚಾರಣೆಯ ಆಧಾರದ ಮೇಲೆ ನೆಲ ಮತ್ತು ಸಮುದ್ರ ಗಡಿಗಳು ಮತ್ತು ವಿಮಾನ ನಿಲ್ದಾಣಗಳ ಮೂಲಕ ಸೌದಿಗೆ ಪ್ರವೇಶಿಸಲು ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

- Advertisement -


ಸೌದಿ ನಾಗರಿಕರು ಕೂಡ ಈ ಮೂರು ದೇಶಗಳಿಗೆ ಪ್ರಯಾಣ ಬೆಳೆಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಕೋವಿಡ್ ನ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸೌದಿಯ ಸಚಿವಾಲಯ ತಿಳಿಸಿದೆ.
ಪ್ರಯಾಣಿಸಲು ಅನುಮತಿ ಇರುವ ದೇಶಗಳಿಗೆ ಪ್ರಯಾಣಿಸಲು ಇಚ್ಛಿಸುವ ನಾಗರಿಕರು ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್ ಹರಡುವ ಪ್ರದೇಶಗಳಿಂದ ದೂರವಿರಬೇಕು ಮತ್ತು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಆಂತರಿಕ ಸಚಿವಾಲಯ ತಿಳಿಸಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

- Advertisement -