Home ಕರಾವಳಿ ಕೃಷ್ಣಾಪುರ ಮದ್ರಸ ವಿದ್ಯಾರ್ಥಿ ಮೇಲೆ ಹಲ್ಲೆ: ಪ್ರಕರಣದ ಹಿನ್ನೆಲೆ ಬಹಿರಂಗ

ಕೃಷ್ಣಾಪುರ ಮದ್ರಸ ವಿದ್ಯಾರ್ಥಿ ಮೇಲೆ ಹಲ್ಲೆ: ಪ್ರಕರಣದ ಹಿನ್ನೆಲೆ ಬಹಿರಂಗ

ಮಂಗಳೂರು: ಕೃಷ್ಣಾಪುರ ಮದರಸ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣವನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು, ಸಂತ್ರಸ್ತ ವಿದ್ಯಾರ್ಥಿಯೇ ಈ ಕೃತ್ಯವೆಸಗಿರುವುದನ್ನು ಪತ್ತೆ ಹಚ್ಚಿದ್ದಾರೆ.


ಈ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಮದ್ರಸ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ವಿದ್ಯಾರ್ಥಿಯ ಹೇಳಿಕೆ, ಪೋಷಕರ ಹೇಳಿಕೆಯನ್ನು ದಾಖಲಿಸಿ ತನಿಖೆ ಕೈಗೊಂಡಾದ 13 ವರ್ಷದ ಸಂತ್ರಸ್ತ ವಿದ್ಯಾರ್ಥಿಯೇ ವೈಯಕ್ತಿಕ ಸಮಸ್ಯೆಯಿಂದ ಈ ನಾಟಕವಾಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.


ವಿದ್ಯಾರ್ಥಿಯನ್ನು ವಿಚಾರಣೆ ನಡೆಸಿದಾಗ, “ನಾನು ಓದುವುದರಲ್ಲಿ ಹಿಂದೆ ಬಿದ್ದಿದ್ದೇನೆ, ಓದಿದರೂ ಅರ್ಥ ಆಗುವುದಿಲ್ಲ, ಶಾಲೆಯಲ್ಲಿ ಒಳ್ಳೆಯ ಸ್ನೇಹಿತರಿಲ್ಲ, ಕಪ್ಪಾಗಿದ್ದಾನೆ ಎಂದು ಸ್ನೇಹಿತರು ದೂರ ಮಾಡುತ್ತಿದ್ದರು. ಮನೆಯಲ್ಲೂ ಬಡತನವಿದೆ. ತಂದೆ ತಾಯಿ ಹಣ ಖರ್ಚು ಮಾಡಿ ನನ್ನನ್ನು ಓದಿಸುತ್ತಿದ್ದರೂ ನನಗೆ ಸರಿಯಾಗಿ ಓದಲು ಆಗುತ್ತಿಲ್ಲ. ಸ್ನೇಹಿತರು ಕೂಡ ನನ್ನಲ್ಲಿ ಹಣ ಮತ್ತು ಸೈಕಲ್ ಇದ್ದಾಗ ಮಾತ್ರ ಹತ್ತಿರ ಬರುತ್ತಾರೆ. ಇದರಿಂದ ನಾನು ಬೇಸರಗೊಂಡು ಬ್ಯಾಗ್ ನಲ್ಲಿದ್ದ ಪೆನ್ ನಿಂದ ಬಟ್ಟೆ ಹರಿದುಕೊಂಡೆ” ಎಂದು ಹೇಳಿಕೆ ನೀಡಿದ್ದಾನೆ.


ಪೊಲೀಸರು ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಕೂಡ ವಿದ್ಯಾರ್ಥಿಯ ಹೇಳಿಕೆಗೆ ಪೂರಕವಾಗಿವೆ. ಈ ಪ್ರಕರಣವನ್ನು ತಾರ್ತಿಕ ಅಂತ್ಯಕ್ಕೆ ಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಮದರಸ ಸಮಿತಿಯವರು ಕೂಡ ಆತಂಕ ವ್ಯಕ್ತಪಡಿಸಿದ್ದರು. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೂಡ ಕೋಮುದ್ವೇಷ ಹಬ್ಬಿಸಲು ಪ್ರಯತ್ನಿಸಿದ್ದರಿಂದ ಆತಂಕಕ್ಕೆ ಕಾರಣವಾಗಿತ್ತು. ಆದ್ದರಿಂದ ಪ್ರಕರಣವನ್ನು ನಾವು ಕೂಡ ಗಂಭೀರವಾಗಿ ಪರಿಗಣಿಸಿದ್ದೆವು. ಮಕ್ಕಳ ಕಲ್ಯಾಣ ಸಮಿತಿ ಮತ್ತು ವೈದ್ಯರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಕ್ರಮಕೈಗೊಳ್ಳಲಾಗಿತ್ತು. ಪೊಲೀಸ್ ಇಲಾಖೆ ಕೂಡ ಬಹಳ ಮುತುವರ್ಜಿ ವಹಿಸಿತ್ತು ಎಂದು ತಿಳಿಸಿದರು.
ಮದ್ರಸ ಸಮಿತಿ, ಪೋಷಕರು, ಉಸ್ತಾದ್ ಅವರನ್ನೂ ಕರೆಸಿ ಈ ವಿವರಗಳನ್ನು ನೀಡಲಾಗಿದೆ. ಈ ಮೂಲಕ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿದೆ ಎಂದು ಶಶಿಕುಮಾರ್ ತಿಳಿಸಿದರು.

Join Whatsapp
Exit mobile version