Home ಕರಾವಳಿ ಪುತ್ತೂರು | ಡಿಕೆಶಿ ವಿರುದ್ಧ ಹೇಳಿಕೆ: ಕೆಪಿಸಿಸಿ ಸಂಯೋಜಕ ಸ್ಥಾನದಿಂದ ಕಾವು ಹೇಮನಾಥ ಶೆಟ್ಟಿ ವಜಾ

ಪುತ್ತೂರು | ಡಿಕೆಶಿ ವಿರುದ್ಧ ಹೇಳಿಕೆ: ಕೆಪಿಸಿಸಿ ಸಂಯೋಜಕ ಸ್ಥಾನದಿಂದ ಕಾವು ಹೇಮನಾಥ ಶೆಟ್ಟಿ ವಜಾ

ಪುತ್ತೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯನ್ನು ಹುದ್ದೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.


ಕಾವು ಹೇಮನಾಥ ಶೆಟ್ಟಿಯವರು ಸಭೆಯೊಂದರಲ್ಲಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೋದಲ್ಲಿ, ಕಾಂಗ್ರೆಸ್ ಟಿಕೆಟ್ ಅನ್ನು ಡಿಕೆ ಶಿವಕುಮಾರ್ ದುಡ್ಡಿಗೆ ಮಾರಾಟ ಮಾಡುತ್ತಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೆ ಕಾವು ಹೇಮನಾಥ ಶೆಟ್ಟಿ ಅವರನ್ನು ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ವಜಾ ಮಾಡಲಾಗಿದೆ. ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಖಚಿತ ಪಡಿಸಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಹೇಮನಾಥ ಶೆಟ್ಟಿ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಖರೀದಿಸಿದ ಹಾಗೆ ನಮ್ಮನ್ನೆಲ್ಲ ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿಲ್ಲ. ನನ್ನ ಭಾಷಣವನ್ನು ತಿರುಚಿ ಹರಿಯ ಬಿಡಲಾಗಿದೆ. ಇದರ ಆಧಾರದಲ್ಲಿ ಪಕ್ಷ ಕ್ರಮ ಕೈಗೊಂಡಿರಬಹುದು ಎಂದು ಹೇಳಿದ್ದಾರೆ.


ನಾನು ಹಲವು ದಶಕದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಅವರ ಮೇಲೆ ನನಗೆ ಗೌರವ, ಅಭಿಮಾನ ಇದೆ. ಅವರ ವಿರುದ್ಧ ನ್ಯಾಯಾಂಗ ಕ್ರಮ ಆದಾಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅವರ ಬಿಡುಗಡೆಗಾಗಿ ಪ್ರಾರ್ಥಿಸಿದ್ದೆ. ಬಿಡುಗಡೆಯಾದಾಗ ಪಟಾಕಿ ಸಿಡಿಸಿದ್ದೆ. ಹೀಗಿರುವಾಗ ಅವರ ವಿರುದ್ಧ ಹೇಳಿಕೆ ನೀಡಲು ಸಾಧ್ಯವೇ? ಇದು ನನ್ನ ವಿರುದ್ಧ ಮಾಡಲಾದ ರಾಜಕೀಯ ಸಂಚು ಎಂದು ಹೇಳಿದ್ದಾರೆ.

Join Whatsapp
Exit mobile version