ಮಲಪ್ಪುರಂ: ಇತ್ತೀಚೆಗೆ ಕೇರಳದ ಕಲ್ಲಿಕೋಟೆಯಲ್ಲಿ ಆರ್‌ಎಸ್‌ಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಸ್ಲಿಂ ಲೀಗ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಕೆ.ಎನ್.ಎ.ಖಾದರ್ ಅವರಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಎಚ್ಚರಿಕೆ ನೀಡಿದೆ.
ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ಸಮರ್ಥಿಸಿ ಖಾದರ್ ಅವರು ನೀಡಿದ ವಿವರಣೆಯ ಕುರಿತು ಪಕ್ಷದ ಸಭೆಯಲ್ಲಿ ಚರ್ಚಿಸಿ, ಪಕ್ಷದ ಪರಂಪರೆಯ ವಿರುದ್ಧವಾಗಿ ನಡೆದುಕೊಂಡ ಕಾರಣ ಖಾದರ್ ಅವರಿಗೆ ಎಚ್ಚರಿಕೆಯನ್ನು ನೀಡಲಾಯಿತು. ಭಾಷಣ ಹಾಗೂ ಸಾರ್ವಜನಿಕವಾಗಿ ನೀಡುವ ಹೇಳಿಕೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಈ ವಿಷಯದಲ್ಲಿ ಪಕ್ಷದ ನೀತಿ-ನಿಯಮಗಳನ್ನು ಪಾಲಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಆರ್‌ಎಸ್‌ಎಸ್ ಆಯೋಜಿಸಿದ್ದ ‘ಸ್ನೇಹಬೋಧಿ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖಾದರ್ ಅವರನ್ನು ಸನ್ಮಾನಿಸಲಾಗಿತ್ತು. ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ಅವರು, ‘ಉತ್ತರ ಭಾರತದ ಅನೇಕ ದೇವಾಲಯಗಳಿಗೆ ನಾನು ಭೇಟಿ ನೀಡಿದ್ದೇನೆ. ಆದರೆ, ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ದೇವಾಲಯವನ್ನೂ ಪ್ರವೇಶಿಸುವ ಬಯಕೆ ಇದೆ’ ಎಂದು ಹೇಳಿದ್ದರು. ಇದರ ಬೆನ್ನಲ್ಲೇ, ಅವರಿಗೆ ಪಕ್ಷದಿಂದ ಎಚ್ಚರಿಕೆ ನೀಡಲಾಗಿದೆ.