Home ಟಾಪ್ ಸುದ್ದಿಗಳು ಇಂದು ತೆರೆ ಕಾಣದ ಬಹು ನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರ | ಥಿಯೇಟರ್ ಮುಂದೆ ಅಭಿಮಾನಿಗಳ...

ಇಂದು ತೆರೆ ಕಾಣದ ಬಹು ನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರ | ಥಿಯೇಟರ್ ಮುಂದೆ ಅಭಿಮಾನಿಗಳ ದಾಂಧಲೆ

► ಥಿಯೇಟರ್ ಗಳ ಮುಂದೆ ಗಲಾಟೆ ನಡೆಸದಂತೆ ಕಿಚ್ಚನ ಮನವಿ

ಬೆಂಗಳೂರು: ಇಂದು ಬಿಡುಗಡೆಯಾಗಬೇಕಿದ್ದ ಬಹು ನಿರೀಕ್ಷಿತ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -3 ಚಿತ್ರ ಕಾರಣಾಂತರಗಳಿಂದ ಪ್ರದರ್ಶನ ವಿಳಂಬಗೊಂಡಿದೆ. ಲಾಕ್ ಡೌನ್ ಬಳಿಕ ನೆಚ್ಚಿನ ನಾಯಕನ ಚಿತ್ರ ಕಾಣಲು ಬಂದಿದ್ದ ಅಭಿಮಾನಿಗಳು ತೀವ್ರ ನಿರಾಸೆಯನುಭವಿಸಿ, ಥಿಯೇಟರ್ ಮುಂಭಾಗವೇ ಆಕ್ರೋಶ ವ್ಯಕ್ತಪಡಿಸಿ ದಾಂಧಲೆ ನಡೆಸಿದ ಘಟನೆಯೂ ನಡೆದಿದೆ.


ಇಂದು ಬೆಳಗ್ಗೆ ರಾಜ್ಯದ ಹಲವಾರು ಥಿಯೇಟರ್ ಗಳಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಅದರಂತೆ ಸಾವಿರಾರು ಅಭಿಮಾನಿಗಳು ಥಿಯೇಟರ್ ಗಳ ಬಳಿ ಜಮಾಯಿಸಿದ್ದರು. ಬೆಳಗ್ಗೆ 7 ಗಂಟೆಯ ಪ್ರದರ್ಶನಕ್ಕೆ ನಿನ್ನೆಯೇ ಎಲ್ಲಾ ಟಿಕೆಟ್ ಗಳು ಸೋಲ್ಡೌಟ್ ಆಗಿದ್ದವು. ಆದರೆ ಸಿನೆಮಾ ನೋಡಲು ಬಂದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದ್ದು, ಚಿತ್ರ ಮಂದಿರದ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೆಲವೆಡೆ ಥಿಯೇಟರ್ ಗಳಿಗೆ ಕಲ್ಲುತೂರಾಟ ನಡೆಸಿದ್ದಾರೆ. ಥಿಯೇಟರ್ ಸಿಬ್ಬಂದಿ ಚಿತ್ರ ಬಿಡುಗಡೆಯಾಗದರ ಬಗ್ಗೆ ಸಮಜಾಯಿಷಿ ನೀಡಿದರೂ ಅಭಿಮಾನಿಗಳು ಕೆರಳಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ.


ಬಿಡುಗಡೆ ವಿಳಂಬಕ್ಕೆ ಕಿಚ್ಚನ ಕ್ಷಮೆ:


ಇನ್ನು ಚಿತ್ರ ಬಿಡುಗಡೆಗೊಳ್ಳಲು ವಿಳಂಬಗೊಂಡ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಕಾರಣಾಂತರಗಳಿಂದ ಕೋಟಿಗೊಬ್ಬ-3 ಚಿತ್ರ ಬಿಡುಗಡೆ ವಿಳಂಬವಾಗುತ್ತಿದೆ. ಆದರೆ ಅಭಿಮಾನಿಗಳು ತಾಳ್ಮೆಯಿಂದ ವರ್ತಿಸಬೇಕು. ಚಿತ್ರ ಬಿಡುಗಡೆ ವಿಳಂಬಕ್ಕೂ ಚಿತ್ರಮಂದಿರಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ, ಥಿಯೇಟರ್ ಗಳ ಮುಂದೆ ಗಲಾಟೆ ಮಾಡದಂತೆ ಸುದೀಪ್ ಮನವಿ ಮಾಡಿದ್ದಾರೆ.

Join Whatsapp
Exit mobile version