Home ಟಾಪ್ ಸುದ್ದಿಗಳು ಕೋಟೆಕಾರು ಬ್ಯಾಂಕ್ ದರೋಡೆ ಕೇಸ್: ದರೋಡೆಕೋರರ ಸಂಚನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಪೊಲೀಸ್ ಕಮಿಷನರ್

ಕೋಟೆಕಾರು ಬ್ಯಾಂಕ್ ದರೋಡೆ ಕೇಸ್: ದರೋಡೆಕೋರರ ಸಂಚನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಪೊಲೀಸ್ ಕಮಿಷನರ್

►ನಾಲ್ವರ ಬಂಧನ, 18.314 ಕೆಜಿ ಚಿನ್ನ, ₹3.80 ಲಕ್ಷ ನಗದು ವಶ


ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯಲ್ಲಿ ಜ.17 ರಂದು ನಡೆದ ದರೋಡೆ ಪ್ತಕರಣದಲ್ಲಿ ಪೊಲೀಸರು ಒಟ್ಟು 18.314 ಕೆಜಿ ಚಿನ್ನ ಹಾಗೂ ₹3.80 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.


ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ , ‘ ಪ್ರಕರಣ ಸಂಬಂಧ ತಮಿಳುನಾಡಿನ ಪದ್ಮನೇರಿಯ ಅಮ್ಮನ್ ಕೋವಿಲ್ ನ ಮುರುಗಂಡಿ ಥೇವರ್ (36 ), ಮುಂಬೈನ ಡೊಂಬಿವಿಲಿ ಪಶ್ಚಿಮದ ಗೋಪಿನಾಥ್ ಚೌಕ್ ನ ಯೋಸುವ ರಾಜಂದ್ರನ್ (35), ಮುಂಬೈ ಚೆಂಬೂರು ತಿಲಕನಗರದ ಕಣ್ಣನ್ ಮಣಿ (36), ಮುರುಗಂಡಿಗೆ ಆಶ್ರಯ ನೀಡಿದ್ದ ಆತನ ತಂದೆ ಎಂ.ಷಣ್ಮುಗಸುಂದರಂ ಸೇರಿ ನಾಲ್ವರನ್ನು ಬಂಧಿಸಿದ್ದೇವೆ’ ಎಂದು ಮಾಹಿತಿ ನೀಡಿದರು.


ಮುಂಬೈಯಲ್ಲಿ ನೆಲೆಸಿರುವ ಮಂಗಳೂರು ಮೂಲದವ ಎನ್ನಲಾಗಿರುವ ಶಶಿ ತೇವರ ಎಂಬಾತ ಆರು ತಿಂಗಳ ಹಿಂದೆ ಕೋಟೆಕಾರ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಹಾಗೂ ದರೋಡೆಗೆ ಸೂಕ್ತವಾದ ಬ್ಯಾಂಕ್ ಎಂಬುದನ್ನು ತಿಳಿಸಿದ್ದ. ಅದರಂತೆ 2024ರ ಆಗಸ್ಟ್, ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಮುರುಗಂಡಿ ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾನೆ. ಶುಕ್ರವಾರ ಮಧ್ಯಾಹ್ನ ಸೂಕ್ತ ದಿನವೆಂದು ನಿರ್ಧರಿಸಿ ಜ. 17ರಂದು ದರೋಡೆ ಕೃತ್ಯ ಎಸಗಿದ್ದಾರೆ. ಮೂರು ಮಂದಿ ಮುಂಬೈಯಿಂದ ಕಾರಿನಲ್ಲಿ ಬಂದಿದ್ದರೆ, ಇಬ್ಬರು ಆರೋಪಿಗಳು ರೈಲಿನಲ್ಲಿ ಆಗಮಿಸಿದ್ದರು. ಕೃತ್ಯ ನಡೆದ ದಿನದಂದು ಮಧ್ಯಾಹ್ನ 12.20ರ ವೇಳೆಗೆ ಸ್ಥಲಕ್ಕೆ ತಲುಪಿದ್ದ ಆರೋಪಿಗಳು, ಅಲ್ಲಿ ಕೆಲ ಹೊತ್ತು ಕಾದು 1.10ರ ವೇಳೆಗೆ ಬ್ಯಾಂಕ್ ಗೆ ನುಗ್ಗಿ ಕೃತ್ಯ ಎಸಗಿ ಪರಾರಿಯಾಗಿದ್ದರು ಎಂದು ವಿವರಿಸಿದರು.


ಮುರುಗಂಡಿ, ಯೋಸುವ ರಾಜೇಂದ್ರನ್ ಹಾಗೂ ಶಶಿ ಥೇವರ್ ಎಂಬುವರು ಮುಂಬೈನ ತಲೋಜಾ ಜೈಲಿನಲ್ಲಿ 2016ರಲ್ಲಿ ಒಟ್ಟಿಗೆ ಇದ್ದರು. ಕೆ.ಸಿ.ರೋಡ್ ನ ಬ್ಯಾಂಕಿನಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಇರುವ ಬಗ್ಗೆ ಹಾಗೂ ಭದ್ರತಾ ವ್ಯವಸ್ಥೆ ಯಲ್ಲಿ ಲೋಪ ಇರುವ ಶಶಿ ಥೇವರ್ ಈ ತಂಡಕ್ಕೆ ಮಾಹಿತಿ ನೀಡಿದ್ದ. ಮುರುಗಂಡಿ, ಯೊಸುವಾ ರಾಜೇಂದ್ರನ್, ಮಣಿಕಣ್ಣನ್, ಶಶಿ ಥೆವರ್ ಹಾಗೂ ಉತ್ತರ ಭಾರತದ ಇತರ ಮೂವರನ್ನು ಒಳಗೊಂಡ ತಂಡವು ಕೆ.ಸಿ.ರೋಡ್ ಸಹಕಾರ ಬ್ಯಾಂಕ್ ದರೋಡೆಗೆ ಆರು ತಿಂಗಳು ಮೊದಲೇ ಸಂಚು ರೂಪಿಸಿತ್ತು. ಸ್ಥಳೀಯ ವ್ಯಕ್ತಿಗಳು ಈ ಕೃತ್ಯಕ್ಕೆ ನೆರವಾಗಿರುವ ಸಾಧ್ಯತೆ ಇದೆ. ಶಶಿ ಥೇವರ್ ಈಗಲೂ ತಲೆಮರೆಸಿಕೊಂಡಿದ್ದು, ಆತನ ಬಂಧನವಾದರೆ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.ಶಶಿ ತೇವರ್ ಸೇರಿ ಇನ್ನೂ ನಾಲ್ವರ ಬಂಧನ ಆಗಬೇಕಿದೆ ಎಂದು ತಿಳಿಸಿದರು.


‘ಮುರುಗಂಡಿ 2024ರ ಆಗಸ್ಟ್ ನಲ್ಲಿ ಕೆ.ಸಿ.ರೋಡ್ ಗೆ ಬಂದು ಬ್ಯಾಂಕ್ ಅನ್ನು ನೋಡಿ ಹೋಗಿದ್ದ. ನಂತರ ಅಕ್ಟೋಬರ್ ನಲ್ಲಿ ಅವರ ತಂಡದ ಕೆಲವರು ಮತ್ತೊಮ್ಮೆ ಕೆ.ಸಿ.ರೋಡ್ ಗೆ ಬಂದಿದ್ದರು.ಆ ಬಳಿಕ ನ.27 ರಂದು ಯೊಸುವಾ ರಾಜೆಂದ್ರನ್ ಮತ್ತು ಮುರುಗಂಡಿ ಮತ್ತೆ ಕೆ.ಸಿರೋಡ್ ಗೆ ಬಂದು ದರೋಡೆಗೆ ಸಂಚು ರೂಪಿಸಿದ್ದರು. ಶುಕ್ರವಾರ ಮಧ್ಯಾಹ್ನ ಸ್ಥಳದಲ್ಲಿ ಜನ ಓಡಾಟ ಕಡಿಮೆ ಇರುವುದರಿಂದ ಕೃತ್ಯಕ್ಕೆ ಆ ದಿನವನ್ನೇ ಆಯ್ಕೆ ಮಾಡಿದ್ದರು ಎಂದು ತಿಳಿಸಿದರು.


ಸಿಸಿ.ಟಿ.ವಿ. ಕ್ಯಾಮೆರಾ ಪರಿಶೀಲಿಸಿದಾಗ ಕೃತ್ಯಕ್ಕೆ ಬಳಸಿದ ಕಾರು ಮುಂಬೈ ನೋಂದಣಿ ಹೊಂದಿರುವುದು ತಿಳಿಯಿತು. ಈ ಮಾಹಿತಿ ಆಧಾರದಲ್ಲಿ ಮುಂಬೈಗೆ ನಮ್ಮ ಪೊಲೀಸರ ತಂಡ ತೆರಳಿತ್ತು. ಅಷ್ಟರಲ್ಲಿ ಅರೋಪಿಗಳು ತಮಿಳುನಾಡಿಗೆ ಪರಾರಿಯಾಗಿದ್ದರು. ನಂತರ ಪೊಲೀಸರು ತಮಿಳುನಾಡಿಗೆ ತೆರಳಿ ಆರೋಪಿ ಗಳನ್ನು ಬಂಧಿಸಿದ್ದಾರೆ. ಚಿನ್ನವನ್ನು ತಮಿಳುನಾಡಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದರು.

Join Whatsapp
Exit mobile version