ಕೋಲಾರ: ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ವಿವಿಧ ಪ್ರಗತಿಪರ ಸಂಘಟನೆಗಳಿಂದ ಇಂದು ಕೋಲಾರ ಬಂದ್’ಗೆ ಕರೆ ನೀಡಿದ್ದು, ಹೋರಾಟಗಾರರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಂದ್ ಹಿನ್ನೆಲೆ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬಸ್ ಡಿಪೋಗೆ ತೆರಳಿ ಬಸ್ ಸಂಚಾರ ನಿಲ್ಲಿಸುವಂತೆ ಮನವಿ ಮಾಡಿದ ಹಿನ್ನಲೆ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ರಸ್ತೆ ಸರಿಪಡಿಸದ ಅಧಿಕಾರಿಗಳು, ರಾಜಕಾರಣಿಗಳು ಕತ್ತೆಗಳೆಂದು ಜನಪ್ರತಿನಿಧಿಗಳಿಗೆ ಕತ್ತೆಗಳ ಸಮೇತ ವಿವಿಧ ಸಂಘಟನೆಗಳ ಮುಖಂಡರು ದಿಕ್ಕಾರ ಹಾಕಿದರು.
ಬಂದ್ ಹಿನ್ನೆಲೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬಲವಂತವಾಗಿ ಬಂದ್ ಮಾಡದಂತೆ ವಿವಿಧ ಸಂಘಟನೆಗಳಿಗೆ ಎಸ್ಪಿ ದೇವರಾಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೋಲಾರ ನಗರದಾದ್ಯಂತ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದರೂ ಕೂಡ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಆದ್ದರಿಂದ ಮೂಲಭೂತ ಸೌಕರ್ಯ ಅವ್ಯವಸ್ಥೆ ಸರಿಪಡಿಸುವಂತೆ ಕರೆ ನೀಡಿ ಹಲವು ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೋಲಾರ ಬಂದ್’ಗೆ ಕರೆ ನೀಡಿತ್ತು. ಬಂದ್’ಗೆ ಬೆಳಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.