ಕೊಹ್ಲಿ 50ನೇ ಒನ್‌ಡೇ ಶತಕ: ಸಚಿನ್ ದಾಖಲೆ ಬ್ರೇಕ್

Prasthutha|

ಒಂದೇ ಪಂದ್ಯದಲ್ಲಿ ಮೂರು ದಾಖಲೆ ಬರೆದ ಕೊಹ್ಲಿ

- Advertisement -

ಮುಂಬಯಿ: ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ 50ನೇ ಶತಕದ ಮೈಲುಗಲ್ಲು ತಲುಪಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯ ಜೊತೆಗೆ ಏಕದಿನ ಪಂದ್ಯದಲ್ಲಿ 50ನೇ ಶತಕ‌ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಏಕದಿನ ಕ್ರಿಕೆಟ್‌‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ 49 ಶತಕ ಈವರೆಗಿನ ದಾಖಲೆಯಾಗಿತ್ತು. ಸಚಿನ್ ಅವರ ದಾಖಲೆಯನ್ನು ಮುರಿಯುವಲ್ಲಿ ಕೊಹ್ಲಿ‌ ಯಶಸ್ವಿಯಾಗಿದ್ದಾರೆ. ಕೊಹ್ಲಿ ಅವರ ಸಾಧನೆಗೆ ವ್ಯಾಪಕ ಮೆಚ್ವುಗೆ ವ್ಯಕ್ತವಾಗಿದ್ದು, ಅಭಿನಂದನೆಗಳ ಮಹಾಪೂರವೇ ಹರಿದಿದೆ.

2023ರ ವಿಶ್ವಕಪ್ ಕೂಟದಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದು ಮೂರು ಶತಕ ಬಾರಿಸಿದ್ದಾರೆ. 10 ಪಂದ್ಯಗಳಲ್ಲಿ ಮೂರು ಶತಕ ಮತ್ತು ಐದು ಅರ್ಧ ಶತಕಗಳ‌ ಮೂಲಕ 711 ರನ್ ಗಳಿಸಿದ್ದಾರೆ. ಇದು ವಿಶ್ವಕಪ್ ಕೂಟವೊಂದರಲ್ಲಿ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚಿನ ವೈಯಕ್ತಿಕ ಸ್ಕೋರ್ ಆಗಿದೆ. 2003ರ ವಿಶ್ವಕಪ್ ಕೂಟದಲ್ಲಿ ಸಚಿನ್ 673 ರನ್ ಗಳಿಸಿದ್ದು ಈವರೆಗೆ ದಾಖಲೆಯಾಗಿತ್ತು. ಸಚಿನ್ ಅವರ ಈ ದಾಖಲೆಯನ್ನು ಕೊಹ್ಲಿ ಅಳಿಸಿ ಹಾಕಿದ್ದಾರೆ.‌ ಆ ಮೂಲಕ ಇಂದಿನ ಪಂದ್ಯದಲ್ಲಿ ಕೊಹ್ಲಿ ಮೂರು ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ, 50ನೇ ಶತಕ ಬಾರಿಸಿದ ಮೊದಲ ದಾಂಡಿಗ ಮತ್ತು ವಿಶ್ವಕಪ್ ಕೂಟವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಕೊಹ್ಲಿ ಅವರ ಪಾಲಾಗಿದೆ.