Home ಟಾಪ್ ಸುದ್ದಿಗಳು ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ: ಆರೋಪಿ ಸಾಫ್ಟ್ ವೇರ್ ಎಂಜಿನಿಯರ್ ರಾಮ್ನಾಗೇಶ್ ಐದು ದಿನ ಪೊಲೀಸ್...

ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ: ಆರೋಪಿ ಸಾಫ್ಟ್ ವೇರ್ ಎಂಜಿನಿಯರ್ ರಾಮ್ನಾಗೇಶ್ ಐದು ದಿನ ಪೊಲೀಸ್ ಕಸ್ಟಡಿಗೆ

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಹತ್ತು ತಿಂಗಳ ಹೆಣ್ಣು ಮಗುವಿಗೆ ಟ್ವಿಟರ್ ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದ 23 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ರಾಮ್ನಾಗೇಶ್ ಅಕುಬಥಿನಿ ಎಂಬಾತನನ್ನು ಮುಂಬೈ ನ್ಯಾಯಾಲಯವು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.


ಆರೋಪಿ ರಾಮ್ ನಾಗೇಶ್ ನನ್ನು ಮುಂಬೈನ ಎಸ್ಪ್ಲನೇಡ್ ನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಗುರುವಾರ ಹಾಜರುಪಡಿಸಲಾಗಿತ್ತು. ರಾಮ್ ನಾಗೇಶ್ ಸಾಮಾಜಿಕ ಜಾಲತಾಣದಲ್ಲಿ ಪದೇಪದೇ ತಮ್ಮ ಪ್ರೊಫೈಲ್ ಬದಲಾಯಿಸಿಕೊಂಡು ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡುತ್ತಿದ್ದ ಎಂದು ಸರ್ಕಾರಿ ಅಭಿಯೋಜಕರು ಹೇಳಿದರು. ಬಳಿಕ ಮ್ಯಾಜಿಸ್ಟ್ರೇಟ್ ಅವರು ಅಕುಬಥನಿ ನನ್ನು ನವೆಂಬರ್ 15ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.


ರಾಜ್ಯದ ಅಗ್ರಶ್ರೇಯಾಂಕಿತ ವಿದ್ಯಾರ್ಥಿಯಾಗಿದ್ದ ಮತ್ತು ಹೈದರಾಬಾದ್ನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಪದವೀಧರನಾದ ಅಕುಬಥಿನಿ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವು ಪಾಕಿಸ್ತಾನದ ಎದುರು ಸೋತ ಬಳಿಕ ಕೊಹ್ಲಿ-ಅನುಷ್ಕಾ ದಂಪತಿಯ ಹತ್ತು ತಿಂಗಳ ಪುತ್ರಿಯ ವಿರುದ್ಧ ಆಕ್ಷೇಪಾರ್ಹವಾದ ಪೋಸ್ಟ್ ಅನ್ನು ಟ್ವಿಟರ್ ನಲ್ಲಿ ಹಾಕಿದ್ದ. ಭಾರತ ತಂಡ ಸೋತಿದ್ದಕ್ಕೆ ಆನ್ ಲೈನ್ನಲ್ಲಿ ವೇಗಿ ಮುಹಮ್ಮದ್ ಶಮಿ ವಿರುದ್ಧ ಅವರ ಧರ್ಮ ಕೇಂದ್ರೀಕರಿಸಿ ದಾಳಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಮಿ ಬೆಂಬಲಕ್ಕೆ ನಿಂತಿದ್ದ ವಿರಾಟ್ ಕೊಹ್ಲಿ ವಿರುದ್ಧ ದಾಳಿ ಆರಂಭವಾಗಿತ್ತು.

ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅಕುಬಥಿನಿ ನನ್ನು ಹೈದರಾಬಾದ್ನಲ್ಲಿ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು. ಕೊಹ್ಲಿ ವ್ಯವಸ್ಥಾಪಕರು ನೀಡಿದ ದೂರನ್ನು ಆಧರಿಸಿ ಮುಂಬೈ ಪೊಲೀಸ್ ನ ಸೈಬರ್ ಘಟಕ ದೂರು ದಾಖಲಿಸಿತ್ತು. ಇದನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.


“ಸಾರ್ವಜನಿಕವಾಗಿ ಹತ್ತು ತಿಂಗಳ ಹೆಣ್ಣು ಮಗುವಿನ ಮೇಲೆ ಆನ್ ಲೈನ್ನಲ್ಲಿ ಬೆದರಿಕೆಯ ಪೋಸ್ಟ್ ಹಾಕಿರುವುದು ಮಹಿಳಾ ಕುಲದ ಘನತೆಗೆ ಧಕ್ಕೆ ಮಾಡುವುದಲ್ಲದೇ ಪೋಷಕರನ್ನು ಅಪಮಾನ ಮಾಡುವುದಾಗಿದೆ” ಎಂದು ಮುಂಬೈ ಪೊಲೀಸರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದರು.


ಕೊಹ್ಲಿ ಪುತ್ರಿ ವಮಿಕಾಗೆ ಆನ್ ಲೈನ್ ಬೆದರಿಕೆ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿಯ ಮಹಿಳಾ ಆಯೋಗವು ಪ್ರಕರಣ ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತ್ತು. ಅಕುಬಥಿನಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳಾದ 354ಎ (ಘನತೆಗೆ ಚ್ಯುತಿ), 506 (ಕ್ರಿಮಿನಲ್ ಬೆದರಿಕೆ), 500 (ಮಾನಹಾನಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67 ಮತ್ತು 67ಬಿ ಅಡಿ ಪ್ರಕರಣ ದಾಖಲಿಸಲಾಗಿದೆ. ಅಕುಬಥಿನಿ ವಿರುದ್ಧ ಐಟಿ ಕಾಯಿದೆ ಅಡಿ ಆರೋಪಗಳು ಸಾಬೀತಾದರೆ ಗರಿಷ್ಠ 5 ವರ್ಷ ಜೈಲು ಅಥವಾ 10 ಲಕ್ಷ ದಂಡ ವಿಧಿಸಬಹುದಾಗಿದೆ.

Join Whatsapp
Exit mobile version