Home ಕ್ರೀಡೆ ಕೊಹ್ಲಿ, ಅಕ್ಷರ್ ಅಬ್ಬರ: T20 WC-2024 ಗೆದ್ದು ಬೀಗಿದ ಭಾರತ

ಕೊಹ್ಲಿ, ಅಕ್ಷರ್ ಅಬ್ಬರ: T20 WC-2024 ಗೆದ್ದು ಬೀಗಿದ ಭಾರತ

ಬಾರ್ಬಡೋಸ್: ವೆಸ್ಟ್‌ಇಂಡೀಸ್‌ನ ಬಾರ್ಬಡೋಸ್‌ ಮೈದಾನದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ T20 WC-2024ನ್ನು ಭಾರತ ತನ್ನದಾಗಿಸಿಕೊಂಡಿದೆ. ದಕ್ಷಿಣ ಆಫ್ರಿಕಾವನ್ನು 7ರ‌ನ್‌ಗಳಿಂದ ಸೋಲಿಸಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಆಸೀಸ್ ವಿರುದ್ಧ ಸೋತಿತ್ತು. ಆದರೆ ಈಗ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಮತ್ತೆ ಚಾಂಪಿಯನ್‌ ಆಗಿದೆ.

20 ಓವರ್‌ಗಳಲ್ಲಿ ಟೀಂ ಇಂಡಿಯಾ 7 ವಿಕೆಟ್‌ ಕಳೆದುಕೊಂಡು 176 ರನ್‌ಗಳನ್ನು ಮಾಡುವ ಮೂಲಕ ದಕ್ಷಿಣ ಆಫ್ರಿಕಾಗೆ ಟಫ್ ಸವಾಲ್ ನೀಡಿತ್ತು. ಈ ಸವಾಲನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಗೆ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಸಾಧ್ಯವಾಯಿತು. ದಕ್ಷಿಣ ಆಫ್ರಿಕ್ರಾ ಸೋಲೊಪ್ಪಿಕೊಂಡು ಶರಣಾದಾಗ ಭಾರತದ ಪಾಲಿನ ಅದ್ಭುತ ನಿಮಿಷಗಳಾಗಿತ್ತು. 17 ವರ್ಷಗಳ ಬಳಿಕ ಟೀಮ್ ಇಂಡಿಯಾ T20 ವಿಶ್ವಕಪ್ ತನ್ನದಾಗಿಸಿಕೊಂಡಿತು. ಟೂರ್ನಿಯಲ್ಲಿ ವೀರೋಚಿತ ಆಡವಾಡಿದ ದಕ್ಷಿಣ ಆಫ್ರಿಕಾ ಫೈನಲ್‌ನಲ್ಲಿ ತೀವ್ರ ನಿರಾಸೆ ಅನುಭವಿಸಿತು. 4 ದಶಕಗಳ ತನ್ನ ವಿಶ್ವಕಪ್​ ಅಭಿಯಾನದಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.

ಭಾರತ ಕ್ರಿಕೆಟ್ ತಂಡಕ್ಕೆ ಇದು ಎರಡನೇ T20 ವಿಸ್ವಕಪ್. 2007ರಲ್ಲಿ ಮೊತ್ತ ಮೊದಲ ಟಿ20 ವಿಶ್ವಕಪ್ ಜಯಿಸಿತ್ತು. 2011ರ ನಂತರ ಭಾರತ ಯಾವುದೇ ವಿಶ್ವಕಪ್ ಪ್ರಶಸ್ತಿ ಜಯಿಸಿರಲಿಲ್ಲ. 2014ರ ಟಿ20 ವಿಶ್ವಕಪ್ ನಲ್ಲಿ ಫೈನಲ್‌ಗೆ ಗೆ ತಲುಪಿದ್ದ ಭಾರತವು ಸೋತಿತ್ತು.

ಟಾಸ್ ಜಯಿಸಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿತ್ತು. ನಾಯಕ ರೋಹಿತ್‌ ಶರ್ಮಾ 9 ರನ್‌ಗಳಿಸಿ ಔಟಾದರೆ, ಪಂತ್‌ ಕೂಡ ಡಕೌಟ್‌ ಆದರು. ಸೂರ್ಯ ಕುಮಾರ್‌ ಕೂಡ ಕೈ ಕೊಟ್ಟರು. ಆದರೆ ಇಲ್ಲಿಯವರೆಗೂ ಫೇಲ್ಯೂರ್‌ ಆಗಿದ್ದ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಅರ್ಧ ಶತಕ ಬಾರಿಸುವ ಮೂಲಕ ಆಸರೆಯಾದರು.

ಅಕ್ಷರ್‌ ಪಟೇಲ್‌ ಅಬ್ಬರ ಬ್ಯಾಟಿಂಗ್‌!

ಇತ್ತ ಅಕ್ಷರ್ ಪಟೇಲ್ ಅಬ್ಬರದ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾದ ಸ್ಕೋರ್‌ ಹೆಚ್ಚಿಸಿದರು. 31 ಬಾಲ್‌ಗಳಲ್ಲಿ ಅಕ್ಷರ್‌ 47 ರನ್‌ಗಳಿಸಿ ಔಟಾದರು. ಕೊಹ್ಲಿಗೆ ಕೊನೆಯಲ್ಲಿ ಶಿವಂ ದುಬೆ ಜೊತೆಯಾದರು. 59 ಬಾಲ್‌ಗಳಲ್ಲಿ 76 ರನ್‌ಗಳಿಸಿ ಕೊಹ್ಲಿ ಔಟಾದರೆ, ಶಿವಂ ದುಬೆ 15 ಬಾಲ್‌ಗಳಲ್ಲಿ 27 ರನ್‌ಗಳಿಸಿ ಔಟಾದರು.

ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಬಳಿಕ ಈ ವಿಶ್ವಕಪ್‌ನಲ್ಲಿ ಮೊದಲ ಪಂದ್ಯದಿಂದಲೇ ಕೊಹ್ಲಿ ಅಬ್ಬರಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕೊಹ್ಲಿ ಮೊದಲ ಪಂದ್ಯದಿಂದ ಫೈನಲ್‌ವರೆಗೂ ದೊಡ್ಡ ರನ್ ಗಳಿಸುವಲ್ಲಿ ವಿಫಲವಾಗಿದ್ದರು. ಫೈನಲ್‌ವರೆಗೆ ಕೊಹ್ಲಿ ಈ ವಿಶ್ವಕಪ್‌ನಲ್ಲಿ ಗಳಿಸಿದ್ದ ಕೇವಲ 75 ರನ್ ಮಾತ್ರ. ಆದರೆ ಫೈನಲ್‌ ಪಂದ್ಯದಲ್ಲಿ 76 ರನ್ ಗಳಿಸುವ ಮೂಲಕ ಭಾರತಕ್ಕೆ ಆಪದ್ಭಾಂದವನಾದರು. ಭಾರತ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಕೊಹ್ಲಿ ಕ್ರೀಸ್ ಕಚ್ಚಿ ಆಡಿದರು.

ವಿರಾಟ್ ಕೊಹ್ಲಿ ತಮ್ಮ 39ನೇ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದರು. ಈ ಮೂಲಕ ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳ ದಾಖಲೆಯನ್ನು ಸರಿಗಟ್ಟಿದರು.

ದಕ್ಷಿಣ ಆಫ್ರಿಕಾದ ಪರ ಮಹಾರಾಜ್ ಹಾಗೂ ನಾಕಿಯಾ ತಲಾ ಎರಡು ಮತ್ತು ರಬಾಡ ಹಾಗೂ ಜಾನ್ಸೆನ್ ತಲಾ ಒಂದು ವಿಕೆಟ್ ಗಳಿಸಿದರು.

ಪಂದ್ಯದ ದಿಕ್ಕು ಬದಲಿಸಿದ ಹಾರ್ದಿಕ್

ಒಂದು ಹಂತದಲ್ಲಿ ಆಫ್ರಿಕಾ ಗೆಲುವಿಗೆ 24 ಎಸೆತಗಳಲ್ಲಿ 26 ರನ್‌ಗಳ ಅಗತ್ಯವಿತ್ತು. ಈ ವೇಳೆ ಹಾರ್ದಿಕ್ 17ನೇ ಓವರ್‌ನ ಮೊದಲ ಎಸೆತದಲ್ಲಿ ಕ್ಲಾಸನ್ ವಿಕೆಟ್ ಪಡೆದು, ಆ ಓವರ್​ನಲ್ಲಿ ಕೇವಲ 4 ರನ್ ನೀಡುವ ಮೂಲಕ ಆಫ್ರಿಕಾ ತಂಡದ ಸಂಕಷ್ಟ ಹೆಚ್ಚಿಸಿದರು. ನಂತರ ಮುಂದಿನ ಓವರ್​ನಲ್ಲಿ ಬುಮ್ರಾ ಕೇವಲ 2 ರನ್ ನೀಡಿ ಮಾರ್ಕೊ ಯಾನ್ಸನ್​ರನ್ನು ಬೌಲ್ಡ್ ಮಾಡಿ ಟೀಂ ಇಂಡಿಯಾವನ್ನು ಗೆಲುವಿನ ಹತ್ತಿರಕ್ಕೆ ತಂದರು.

ಕೊನೆಯ 2 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾಕ್ಕೆ 20 ರನ್ ಅಗತ್ಯವಿತ್ತು. 19ನೇ ಓವರ್‌ ಬೌಲ್ ಮಾಡಿದ ಅರ್ಷದೀಪ್ ಕೇವಲ 4 ರನ್ ನೀಡಿದರು. ಕೊನೆಯ ಓವರ್‌ನಲ್ಲಿ 16 ರನ್‌ಗಳ ಅಗತ್ಯವಿತ್ತು. 20ನೇ ಓವರ್ ಬೌಲ್ ಮಾಡುವ ಜವಬ್ದಾರಿ ಹೊತ್ತ ಹಾರ್ದಿಕ್ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರ ವಿಕೆಟ್ ಪಡೆಯುವ ಮೂಲಕ ಗೆಲುವಿನ ಮುದ್ರೆಯೊತ್ತಿದರು. ಈ ಓವರ್​ನಲ್ಲಿ ಹಾರ್ದಿಕ್ ಕೇವಲ 8 ರನ್ ನೀಡಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು.

ಭಾರತದ ಪರ ಹಾರ್ದಿಕ್ ಪಾಂಡ್ಯ 3, ಅರ್ಷ್ ದೀಪ್ ಸಿಂಗ್ಮತ್ತು ಜಸ್ ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.

ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ ತಂಡ ಪ್ರಧಾನ ಕೋಚ್ ರಾಹುಲ್ ದ್ರಾವಿಡ್

Join Whatsapp
Exit mobile version