Home ಟಾಪ್ ಸುದ್ದಿಗಳು ಕೇಜ್ರಿವಾಲ್ ಸಮ್ಮುಖದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಎಎಪಿ ಸೇರ್ಪಡೆ

ಕೇಜ್ರಿವಾಲ್ ಸಮ್ಮುಖದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಎಎಪಿ ಸೇರ್ಪಡೆ

➤ಬೆಂಗಳೂರಿನಲ್ಲಿ ಎಎಪಿಯ ಬೃಹತ್ ರೈತ ಸಮಾವೇಶ

ಬೆಂಗಳೂರು: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಉಪಸ್ಥಿತಿಯಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಮ್ ಆದ್ಮಿ ಪಾರ್ಟಿ ಸೇರಿದರು.

ಸಮಾವೇಶದಲ್ಲಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, “ಕರ್ನಾಟಕದಲ್ಲಿ 40% ಕಮಿಷನ್ ಸರ್ಕಾರವಿದೆ ಹಾಗೂ ದೆಹಲಿಯ ಎಎಪಿ ಸರ್ಕಾರವು 0% ಕಮಿಷನ್ ಸರ್ಕಾರವಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಿಬಿಐ, ಇಡಿ, ಐಟಿ ಅಧಿಕಾರಿಗಳು ನನ್ನ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದರು. ಅವರಿಗೆ ಒಂದು ಮಫ್ಲರ್ ಸಿಕ್ಕಿತೇ ಹೊರತು ಯಾವುದೇ ತಪ್ಪು ಕಾಣಲಿಲ್ಲ. ಈ ಮೂಲಕ ನಮ್ಮದು ಜೀರೋ ಕಮಿಷನ್ ಸರ್ಕಾರವೆಂದು ಕೇಂದ್ರ ಸರ್ಕಾರವೇ ಸಿಬಿಐ ಪ್ರಮಾಣಪತ್ರ ನೀಡಿದೆ” ಎಂದು ವ್ಯಂಗ್ಯವಾಡಿದರು.

“ರಾಜ್ಯದ ರೈತರು ಮನಸ್ಸು ಮಾಡಿದರೆ, 20% ಕಮಿಷನ್ ಪಡೆಯುವ ಕಾಂಗ್ರೆಸ್ ಹಾಗೂ 40% ಕಮಿಷನ್ ಪಡೆಯುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಹುದು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರಿಗೂ ವಿವಿಧ ಸೌಲಭ್ಯಗಳನ್ನು ನೀಡುವ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಆಮ್ ಆದ್ಮಿ ಪಾರ್ಟಿಯನ್ನು ಇಲ್ಲೂ ಅಧಿಕಾರಕ್ಕೆ ತರಬಹುದು. ಇಂದು ಬಿಜೆಪಿ ಪಕ್ಷವು ದೇಶದೆಲ್ಲೆಡೆ ಕೋಮು ಗಲಭೆ ಸೃಷ್ಟಿಸುತ್ತಿದ್ದರೆ, ಆಮ್ ಆದ್ಮಿ ಪಾರ್ಟಿಯು ಜನಪರ ಆಡಳಿತ ನೀಡಲು ಹವಣಿಸುತ್ತಿದೆ” ಎಂದು  ಅರವಿಂದ್ ಕೇಜ್ರಿವಾಲ್ ಹೇಳಿದರು.

ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಮಾತನಾಡಿ, “ದೆಹಲಿಯ ಜನರು ವಿಶ್ವದರ್ಜೆಯ ಆರೋಗ್ಯ, ಶಿಕ್ಷಣ, ಕ್ರೀಡಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅವರಿಗೆ ವಿದ್ಯುತ್, ಕುಡಿಯುವ ನೀರು ಮುಂತಾದ ಮೂಲಭೂತ ಸೌಲಭ್ಯಗಳು ಉಚಿತವಾಗಿ ಸಿಗುತ್ತಿದೆ. ದೆಹಲಿಯ ಜನರಿಗೆ ವಿಧಿಸುವಷ್ಟೇ ತೆರಿಗೆಯನ್ನು ಕರ್ನಾಟಕದ ಜನರಿಗೂ ವಿಧಿಸಲಾಗುತ್ತಿದೆ. ಆದರೆ ಅಲ್ಲಿನ ಜನರಿಗೆ ಸಿಗುತ್ತಿರುವ ಸೌಲಭ್ಯಗಳು ಇಲ್ಲಿನ ಜನರಿಗೆ ಸಿಗುತ್ತಿಲ್ಲ. ಈ ಅನ್ಯಾಯ ಸರಿಯಾಗಬೇಕಾದರೆ ಇಲ್ಲೂ ಆಮ್ ಆದ್ಮಿ ಪಾರ್ಟಿಯ ಸರ್ಕಾರವೇ ಬರಬೇಕು” ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ರವರ ಮಾತನಾಡಿ, “ರೈತರ ಭಾವನೆಗಳಿಗೆ ರಾಜಕೀಯವಾಗಿ ಶಕ್ತಿ ಸಿಗಬೇಕಾದರೆ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿದ್ದೆವು. ಕರ್ನಾಟಕವನ್ನು ಆಳಿದ ಮೂರೂ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ ಎಂಬುದು ಸಾಬೀತಾಗಿದೆ. ಈಗ ನಾಡಿನ ರೈತರಿಗೆ ಭರವಸೆಯ ಬೆಳಕಾಗಿ ಅರವಿಂದ್ ಕೇಜ್ರಿವಾಲ್ ಎಂಬ ನಾಯಕ ಹಾಗೂ ಆಮ್ ಆದ್ಮಿ ಪಾರ್ಟಿ ಎಂಬ ಪಕ್ಷ ಸಿಕ್ಕಿದೆ. ಇವರ ಪ್ರಾಮಾಣಿಕತೆ ಹಾಗೂ ಜನಸಾಮಾನ್ಯರ ಬಗೆಗಿನ ಕಾಳಜಿಯಿಂದ ನಾಡಿನ ರೈತರಿಗೆ ಒಳ್ಳೆಯದಾಗಲಿದೆ.ಇವರು ದೆಹಲಿಯಲ್ಲಿ ಸಾಧಿಸಿ ತೋರಿಸಿದ್ದಾರೆ” ಎಂದು ಹೇಳಿದರು.

“ಕೃಷಿ ಭೂಮಿಯು ಉದ್ಯಮಿಗಳ ಪಾಲಾಗುವಂತೆ ಮಾಡಿ, ರೈತರು ಹಾಗೂ ಕೃಷಿ ಕಾರ್ಮಿಕರ ಉದ್ಯೋಗ ಕಿತ್ತುಕೊಳ್ಳಲು ಸರ್ಕಾರವು ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ಮಾಡಿದೆ. ಎಪಿಎಂಸಿ ಕಾಯಿದೆ, ಜಾನುವಾರು ಕಾಯಿದೆಗೆ ತಿದ್ದುಪಡಿ ತಂದಿರುವುದರಿಂದ ಕೂಡ ರೈತರೇ ತೊಂದರೆ ಅನುಭವಿಸಲಿದ್ದಾರೆ. ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಕೂಡ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು ಎಂದು ನಾವು ಹಲವು ತಿಂಗಳಿಂದ ಆಗ್ರಹಿಸುತ್ತಿದ್ದೇವೆ. ಆದರೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ಸಿಎಂ ಬಸವರಾಜ್ ಬೊಮ್ಮಾಯಿಯವರು ಇದನ್ನು ಅಧಿವೇಶನದಿಂದ ಅಧಿವೇಶನಕ್ಕೆ ಮುಂದೂಡುತ್ತಲೇ ಇದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಎಎಪಿಗೆ ರೈತ ಸಂಘದ ಸಂಪೂರ್ಣ ಬೆಂಬಲ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಉಪಸ್ಥಿತಿಯಲ್ಲಿ ನಡೆದ ರೈತ ಸಮಾವೇಶದಲ್ಲಿ ರಾಜ್ಯ ರೈತ ಸಂಘವು ಆಮ್ ಆದ್ಮಿ ಪಾರ್ಟಿಗೆ ಸಂಪೂರ್ಣ ಬೆಂಬಲ ಘೋಷಿಸಿದರು. ಈ ಕುರಿತು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, “ರಾಜ್ಯ ರೈತ ಸಂಘವು ಹಿಂದಿನಂತೆಯೇ ಸ್ವತಂತ್ರ ಸಂಘಟನೆಯಾಗಿ ಮುಂದುವರಿಯಲಿದೆ. ಆದರೆ ರಾಜಕೀಯವಾಗಿ ಆಮ್ ಆದ್ಮಿ ಪಾರ್ಟಿಗೆ ಸಂಪೂರ್ಣ ಬೆಂಬಲ ನೀಡಲಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯನ್ನು ಅಧಿಕಾರಕ್ಕೆ ತರಲು ರೈತ ಸಂಘದ ಕಾರ್ಯಕರ್ತರು ಹಗಲಿರುಳು ಶ್ರಮಿಸಲಿದ್ದಾರೆ. ನಾಡಿನ ಸಮಸ್ತ ರೈತರ ಹಿತಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.

ಎಎಪಿಗೆ ಮಥಾಯಿ ಸೇರ್ಪಡೆ

ಸಮಾವೇಶದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿಯವರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು. ದಕ್ಷ ಅಧಿಕಾರಿ ಎಂದೇ ಹೆಸರು ಮಾಡಿರುವ ಮಥಾಯಿಯವರು, ಎಂದೂ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಳ್ಳದ ತಮ್ಮ ನಡೆಯಿಂದಾಗಿ 18 ವರ್ಷಗಳ ವೃತ್ತಿ ಜೀವನದಲ್ಲಿ 28ಕ್ಕೂ ಹೆಚ್ಚು ಸಲ ವರ್ಗಾವಣೆಯ ಶಿಕ್ಷೆ ಅನುಭವಿಸಿದ್ದಾರೆ. ಎರಡು ವಾರಗಳ ಹಿಂದೆಯಷ್ಟೇ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್‌ರವರು ಆಮ್ ಆದ್ಮಿ ಪಾರ್ಟಿ ಸೇರಿದ್ದರು.

ಆಮ್ ಆದ್ಮಿ ಪಾರ್ಟಿ ಮುಖಂಡರಾದ ಎಚ್.ಡಿ.ಬಸವರಾಜು, ಭಾಸ್ಕರ್ ರಾವ್, ಮೋಹನ್ ದಾಸರಿ, ಪ್ರಕಾಶ್ ಕಮರೆಡ್ಡಿ,

ರೈತ ಸಂಘದ ಮುಖಂಡರಾದ ಬಸವರಾಜಪ್ಪ, ಭಕ್ತರಹಳ್ಳಿ ಬೈರೇಗೌಡ, ಮಹಾಂತೇಶ್, ಮಂಜುನಾಥ ಗೌಡ, ರಘು, ರವಿಚಂದ್ರ, ಕಾರ್ತಿಕ್, ರೆಡ್ಡಿಹಳ್ಳಿ ವೀರಣ್ಣ, ಸತೀಶ್ ಕೆಂಕೆರೆ, ಹೊನ್ನೂರು ಮುನಿಯಪ್ಪ, ಗಣೇಶ್, ನಾಗರಾಜ್, ಶಾಂತವೀರ ರೆಡ್ಡಿ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.

Join Whatsapp
Exit mobile version