Home ಟಾಪ್ ಸುದ್ದಿಗಳು ಕೊಡಗು: ಶಾಲೆಗೆ ಎಂಟ್ರಿ ಕೊಟ್ಟ ಕಾಡಾನೆ; ವಿದ್ಯಾರ್ಥಿ, ಪೋಷಕರಲ್ಲಿ ಆತಂಕ

ಕೊಡಗು: ಶಾಲೆಗೆ ಎಂಟ್ರಿ ಕೊಟ್ಟ ಕಾಡಾನೆ; ವಿದ್ಯಾರ್ಥಿ, ಪೋಷಕರಲ್ಲಿ ಆತಂಕ

ಮಡಿಕೇರಿ: ಕಾಡಾನೆಯೊಂದು ಶಾಲಾ ಆವರಣಕ್ಕೆ ನುಗ್ಗಿ ಶಾಲೆಯ ಆಸ್ತಿಗೆ ಹಾನಿ ಉಂಟುಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಗೆ ಒಳಪಡುವ ಗುಹ್ಯ ಗ್ರಾಮದಲ್ಲಿ ನಡೆದಿದೆ.

ಗುಹ್ಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಮುಂಜಾನೆ ವೇಳೆ ಕಾಡಾನೆಯೊಂದು ಬಂದಿದ್ದು, ಶಾಲಾ ಆವರಣದಲ್ಲಿದ್ದ ತೆಂಗಿನ ಮರ, ಬಾಳೆ ಗಿಡಗಳನ್ನು ಧ್ವಂಸ ಮಾಡಿ ಅಟ್ಟಹಾಸ ಮೆರೆದಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಹಾಗೂ ವಿದ್ಯಾರ್ಥಿ ಪೋಷಕರಲ್ಲಿ ಮತ್ತೆ ಆತಂಕ ಎದುರಾಗಿದೆ.

2018 ರಲ್ಲಿ ಹಾಡಹಗಲೇ ಕಾಡಾನೆಗಳ ಹಿಂಡು ಇದೇ ಶಾಲಾ ಆವರಣದೊಳಗೆ ಬಂದು ದೊಡ್ಡಮಟ್ಟದ ಸುದ್ದಿಯಾಗಿತ್ತು. ತದನಂತರದಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ,  ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ಸುತ್ತ ನವೀನ ಮಾದರಿಯ ಸೋಲಾರ್ ಬೇಲಿ ಅಳವಡಿಸುವ ಮೂಲಕ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಿತ್ತು. ಆದರೆ ಇದೀಗ ಕೆಲ ವರ್ಷಗಳ ಬಳಿಕ ಮತ್ತೆ ಕಾಡಾನೆಯೊಂದು ಸೋಲಾರ್ ಬೇಲಿಗೂ ಕ್ಯಾರೇ ಎನ್ನದೆ ಶಾಲಾ ಆವರಣ ಪ್ರವೇಶಿಸಿದ್ದು, ಶಾಲೆಯ ಆಸ್ತಿಗೆ ಹಾನಿಯುಂಟುಮಾಡಿದೆ.

ಶಾಲೆಗೆ ರಜೆ ಇರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಸೋಲಾರ್ ಬೇಲಿ ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದರಿಂದಲೇ ಕಾಡಾನೆಗಳು ಹೀಗೆ ಸಲೀಸಾಗಿ ಶಾಲೆಯೊಳಗೆ ಬರಲು ಸಾಧ್ಯವಾಗಿದೆ ಎಂದು ದೂರಿರುವ ಸಾರ್ವಜನಿಕರು ಅರಣ್ಯ ಇಲಾಖೆಯ ನಿರ್ಲಕ್ಷ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸೋಲಾರ್ ಬೇಲಿ ದುರಸ್ತಿ ಪಡಿಸುವಂತೆ ಆಗ್ರಹಿಸಿದ್ದಾರೆ.

Join Whatsapp
Exit mobile version