ಮಡಿಕೇರಿ: ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ಅಮಾಯಕ ವಿದ್ಯಾರ್ಥಿಯ ಫೋಟೋ ಬಳಸಿ ಅಪಪ್ರಚಾರ ಮಾಡುತ್ತಿರುವವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಬೇಕೆಂದು ಕುಶಾಲನಗರ ತಾಲೂಕು ಮುಸ್ಲಿಂ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಕರೀಂ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಯ ತಂದೆಯನ್ನು ಸಿದ್ದಾಪುರದಲ್ಲಿ ಭೇಟಿಯಾಗಿ ಮಾಹಿತಿ ಪಡೆದ ನಂತರ ಮಾತನಾಡಿದ ಒಕ್ಕೂಟದ ಸದಸ್ಯ ಕರೀಂ, ಕಿಡಿಗೇಡಿಗಳು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯ ಫೋಟೋವನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಯಂತೆ ಬಿಂಬಿಸಿ ಅಪಪ್ರಚಾರ ಮಾಡುವ ಮೂಲಕ ಒಂದು ಕುಟುಂಬದ ನೆಮ್ಮದಿ ಹಾಳು ಮಾಡಿದ್ದಾರೆ. ಪೊಲೀಸರ ತನಿಖೆಯ ಹಾದಿಯನ್ನು ತಪ್ಪಿಸಲು ಅಪಪ್ರಚಾರ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಅಪಪ್ರಚಾರದ ಮೂಲಕ ಜನರ ಭಾವನೆಯನ್ನು ಕೆರಳಿಸಿ ಶಾಂತಿಯುತವಾಗಿರುವ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವವರ ಮೇಲೆ ಪೊಲೀಸರು ನಿಗಾವಹಿಸಬೇಕು, ವಿದ್ಯಾರ್ಥಿಯ ತಂದೆ ನೀಡಿರುವ ದೂರಿನಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ ಅವರು ನೊಂದ ವಿದ್ಯಾರ್ಥಿಯ ಕುಟುಂಬಕ್ಕೆ ಎಲ್ಲಾ ರೀತಿಯ ಕಾನೂನು ನೆರವು ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಸಮಿತಿ ಸದಸ್ಯರಾದ ಶರೀಫ್, ಪಾಷಾ, ಝಕರಿಯಾ, ಅಬ್ದುಲ್ಲಾ, ಇರ್ಫಾನ್ ಮತ್ತು ಜಲೀಲ್ ಇದ್ದರು.