Home ಟಾಪ್ ಸುದ್ದಿಗಳು ಕೊಡಗು: ಭರ್ಜರಿಯಾಗಿ ಸುರಿದ ಮುಂಗಾರು ಪೂರ್ವ ಮಳೆ, ಆತಂಕದ ವಾತಾವರಣದಲ್ಲಿ ಜನತೆ

ಕೊಡಗು: ಭರ್ಜರಿಯಾಗಿ ಸುರಿದ ಮುಂಗಾರು ಪೂರ್ವ ಮಳೆ, ಆತಂಕದ ವಾತಾವರಣದಲ್ಲಿ ಜನತೆ

ಮಡಿಕೇರಿ:  ಈ ವರ್ಷ ಭರ್ಜರಿ ಮುಂಗಾರು ಪೂರ್ವ ಮಳೆ ಸುರಿದ ಪರಿಣಾಮ ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿದೆ. 2018ರಿಂದ ಸತತ ಮೂರು ವರ್ಷ ಜಿಲ್ಲೆಯಲ್ಲಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದ ಕಾರಣ  ಈ ವರ್ಷದ ಮಳೆಗಾಲ ಹೇಗಿರಬಹುದು ಎಂದು ಚಿಂತಾಕ್ರಾಂತರಾದ ಜಿಲ್ಲೆಯ ಜನತೆ ಭಯದ ವಾತಾವರಣದಲ್ಲೇ ಬದುಕುತ್ತಿದ್ದಾರೆ.

ಮುಂಗಾರು ಪೂರ್ವ ಮಳೆ ಮೇ ತಿಂಗಳಿನಲ್ಲಿ ಸುರಿದರೆ, ಸಹಜವಾಗಿ ಮುಂಗಾರು ಮಳೆ ವಿಳಂಬವಾಗಲಿದೆ ಎಂಬುದು ಹಿರಿಯರ ಅಭಿಪ್ರಾಯ. ಆದರೆ, 2018ರಲ್ಲಿ ಪ್ರಾಕೃತಿಕ ವಿಕೋಪದ ಸಂಭವಿಸಿದ್ದ ವರ್ಷದಲ್ಲಿ ಎಪ್ರಿಲ್‌ ಹಾಗೂ ಮೇ ತಿಂಗಳಲ್ಲೇ  ಭಾರೀ ಮಳೆ ಸುರಿದಿತ್ತು. ಈ ವರ್ಷವೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.

ಹೋಬಳಿವಾರು ನೋಡಲ್‌ ಅಧಿಕಾರಿಗಳ ನೇಮಕ ಮಾಡಲಾಗಿದ್ದು,  ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನದಿ ಪಾತ್ರ ಹಾಗೂ ಸೂಕ್ಷ್ಮ ಪ್ರದೇಶದ ನಿವಾಸಿಗಳಿಗೆ ಮುನ್ನೆಚ್ಚರಿಕೆಯಾಗಿ ನೋಟಿಸ್‌ ನೀಡುವ ಪ್ರಕ್ರಿಯೆ ಆರಂಭವಾಗಿವೆ.

ಈ ವರ್ಷ ಮಹಾ ಮಳೆ ಸುರಿದು ಅನಾಹುತ ಸಂಭವಿಸಿದರೆ ಜನ ಹಾಗೂ ಜಾನುವಾರು ರಕ್ಷಣೆಗೆ ಅನುಕೂಲವಾಗಲೆಂದು ಹಾರಂಗಿ ಹಿನ್ನೀರಿನಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯದ ತಾಲೀಮು ನಡೆಸಿದ್ದಾರೆ.

ಎನ್‌ಡಿಆರ್‌ಎಫ್‌ನ ಒಂದು ತಂಡವು ಮಡಿಕೇರಿಗೆ ಆಗಮಿಸಲಿದ್ದು,  ರಕ್ಷಣಾ ಸಾಮಗ್ರಿಗಳು ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ. ರ‍್ಯಾಫ್ಟರ್‌ಗಳನ್ನು ಸಜ್ಜು ಮಾಡಿಕೊಳ್ಳಲಾಗಿದ್ದು, ರ‍್ಯಾಫ್ಟಿಂಗ್  ಸಿಬ್ಬಂದಿಯನ್ನೂ ರಕ್ಷಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಚಿಂತಿಸಲಾಗಿದೆ.

ಭೂವಿಜ್ಞಾನಿಗಳ ತಂಡವು ಜಿಲ್ಲೆಗೆ ಆಗಮಿಸಿ ಸೂಕ್ಷ್ಮ ಪ್ರದೇಶಗಳನ್ನು ಪರಿಶೀಲಿಸಲಿದೆ. ಮಳೆಗಾಲ ಮುಗಿಯುವವರೆಗೆ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ತಂಡ ಜಿಲ್ಲೆಯಲ್ಲೇ ಇರಲಿವೆ  ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ತಿಳಿಸಿದ್ದಾರೆ.

Join Whatsapp
Exit mobile version