Home ಟಾಪ್ ಸುದ್ದಿಗಳು ಕೊಡಗು: ಅಕ್ರಮ ಹರಳು ಕಲ್ಲು ಸಾಗಾಣಿಕೆ; ಲಾರಿ ಪೊಲೀಸ್ ವಶ

ಕೊಡಗು: ಅಕ್ರಮ ಹರಳು ಕಲ್ಲು ಸಾಗಾಣಿಕೆ; ಲಾರಿ ಪೊಲೀಸ್ ವಶ

ಮಡಿಕೇರಿ: ಹರಳುಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿ ಹಾಗೂ ಕಲ್ಲುಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಸುಂಟಿಕೊಪ್ಪದ ಬಳಿ ನಡೆದಿದೆ.


ಪೊಲೀಸ್ ನಿಯಂತ್ರಣ ಕಚೇರಿಗೆ ಬಂದ ಮಾಹಿತಿ ಅನ್ವಯ ಮೇಕೇರಿ ಗ್ರಾಮದ ಜಮೀನೊಂದರಿಂದ ಕುಶಾಲನಗರಕ್ಕೆ ಹರಳುಕಲ್ಲುಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾದ ಲಾರಿ ಹಾಗೂ ಕಲ್ಲುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೀಡಿದ್ದಾರೆ.


‘ಚಾಲಕನನ್ನು ವಿಚಾರಿಸಿದಾಗ ಮೇಕೇರಿ ಗ್ರಾಮದ ಹೊಲವೊಂದರಿಂದ ಕುಶಾಲನಗರಕ್ಕೆ ಕಲ್ಲುಗಳನ್ನು ಸಾಗಿಸಲು ಬಾಡಿಗೆ ಪಡೆಯಲಾಗಿತ್ತು. ಈ ಕಲ್ಲುಗಳು ಯಾವ ಜಾತಿಗೆ ಸೇರಿದ್ದವೆಂದು ಗೊತ್ತಿಲ್ಲ ಎಂದು ಹೇಳಿದ್ದಾನೆ. ಮೇಕೇರಿ ಗ್ರಾಮದ ಹೊಲಗಳಲ್ಲಿ ಪರಿಶೀಲಿಸಿದಾಗ ಇದೇ ಸ್ವರೂಪದ ಕಲ್ಲುಗಳು ಪತ್ತೆಯಾಗಿವೆ.


ಮೇಲ್ನೋಟಕ್ಕೆ ಸಾಮಾನ್ಯ ಕಲ್ಲಿನಂತೆ ಕಾಣುವ ಈ ಕಲ್ಲುಗಳು ‘ಫುಕ್‌ಸೈಟ್ ಕ್ವಾರ್ಟ್ಜೈಟ್’ ಜಾತಿಗೆ ಸೇರಿದ ಕಲ್ಲುಗಳಾಗಿದ್ದು, ಕಲ್ಲಿನೊಳಗೆ ಅಲ್ಲಲ್ಲಿ ‘ಕೊರಾಂಡಂ’ ಎಂಬ ಹರಳು ಕಲ್ಲುಗಳು ಇರಬಹುದು ಎನ್ನಿಸುತ್ತಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಭೂವಿಜ್ಞಾನಿ ಶ್ರೀನಿವಾಸ್, ‘ಇವು ಹರಳುಕಲ್ಲುಗಳು ಎಂಬುದು ಇನ್ನೂ ಖಚಿತವಾಗಿಲ್ಲ. ಹಾಗಾಗಿ, ಕಲ್ಲುಗಳ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ತಿಳಿಸಲಾಗಿದೆ’ ಎಂದರು.


ಇತ್ತೀಚೆಗೆ ಚೆಂಬು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭೂಮಿ ಕಂಪಿಸುತ್ತಿರುವುದಕ್ಕೆ ಅಕ್ರಮ ಹರಳುಕಲ್ಲು ಗಣಿಗಾರಿಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ನಿರಾಕರಿಸಿದ್ದಾರೆ.

Join Whatsapp
Exit mobile version