ಕೊಡಗು: ಕಳೆದ ಐದಾರು ವರ್ಷಗಳಿಂದ ಭೂಕುಸಿತ, ಪ್ರವಾಹದಿಂದ ನಲುಗಿರುವ ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಭೂಮಿ ಕಂಪಿಸಿದೆ. ಇದು ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ತಂದಿಟ್ಟಿದೆ.
ಮಡಿಕೇರಿ ತಾಲೂಕಿನ ಮದೆನಾಡು, ಎರಡನೇ ಮೊಣ್ಣಂಗೇರಿ, ಜೋಡುಪಾಲ, ಬೆಟ್ಟತ್ತೂರು ಹಾಗೂ ದೇವಸ್ತೂರುಗಳಲ್ಲಿ ಬುಧವಾರ ಬೆಳಿಗ್ಗೆ 10.50 ರ ವೇಳೆಯಲ್ಲಿ ಭೂ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆಯ ಭೂಕಂಪನ ಆಗಿದ್ದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಭೂಕಂಪನ ಆಗಿರುವುದನ್ನು ಖಚಿತಪಡಿಸಿದೆ. ಭೂಕಂಪನ ಆಗಿರುವುದನ್ನು ಅನುಭವಿಸಿದವರು ತೀವ್ರ ಆತಂಕಗೊಂಡಿದ್ದಾರೆ.
2018 ರಲ್ಲಿಯೂ ಇದೇ ಭಾಗಗಳಲ್ಲಿ ಮಳೆಗಾಲಕ್ಕೂ ಮುಂಚಿತವಾಗಿ ಭೂ ಕಂಪನವಾಗಿತ್ತು. ಆದರೆ ಅದ್ಯಾವುದೂ ಗಮನಕ್ಕೆ ಬಂದಿರಲಿಲ್ಲ. ಅತೀ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿತ್ತು. ನಂತರ ಮಳೆಗಾಲದಲ್ಲಿ ಸುರಿದ ತೀವ್ರ ಮಳೆಗೆ ಮಡಿಕೇರಿ ತಾಲ್ಲೂಕಿನ ಹಲವೆಡೆ ಅಂದರೆ ಬರೋಬ್ಬರಿ 30 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಹಾಗೂ ಪ್ರವಾಹ ಎದುರಾಗಿತ್ತು. ಇದರಿಂದ 25 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ ಸಾವಿರಾರು ಜನರು ಮನೆ ಮಠ ಕಳೆದುಕೊಂಡಿದ್ದರು.