ಮೌನವಾದ ಶೋಷಿತರ ಪರ ದನಿ ಕೆ.ಎಂ.ಶರೀಫ್

Prasthutha|

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ.ಶರೀಫ್ ರವರ ಅಗಲಿಕೆಗೆ ಕರ್ನಾಟಕದಾದ್ಯಂತ ಸಂತಾಪ ವ್ಯಕ್ತವಾಗುತ್ತಿದೆ. ಅವರ ನಿಧನದೊಂದಿಗೆ ಸಮುದಾಯವು ಶೋಷಿತರ ಪರ ದನಿಯೊಂದನ್ನು ಕಳೆದುಕೊಂಡಿದೆ ಎಂಬ ದುಃಖವು ಜನಸಾಮಾನ್ಯರ ಮಧ್ಯೆ ವ್ಯಕ್ತವಾಗುತ್ತಿದೆ.

- Advertisement -

ಲೇಖಕ, ವಿಮರ್ಶಕ, ಅನುವಾದಕ, ಗ್ರಂಥಕರ್ತ, ಭಾಷಣಕಾರ ಹಾಗೂ ಪತ್ರಕರ್ತರಾಗಿದ್ದ ಕೆ.ಎಂ.ಶರೀಫ್ 2000 ನೆ ಇಸವಿಯಿಂದ ಸಾಮಾಜಿಕ ರಂಗದಲ್ಲಿ ದಣಿವಿಲ್ಲದ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ.

ಬಿಎಸ್ಸಿ ಪದವೀಧರನಾಗಿದ್ದ ಅವರು ನಾಲ್ಕು ವರ್ಷಗಳ ಕಾಲ ದುಬೈಯಲ್ಲಿ ವೃತ್ತಿ ಜೀವನವನ್ನು ನಡೆಸಿದ್ದರು. ಅವರು ಸಮಸ್ತ ಕೇರಳ ಜಂಯಿಯ್ಯತ್ತುಲ್‌ ಉಲೆಮಾದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಿತ್ತಬೈಲು ಜಬ್ಬಾರ್ ಉಸ್ತಾದರ ಬಳಿ  ಧಾರ್ಮಿಕ ವಿದ್ಯಾಭ್ಯಾಸವನ್ನು ಪಡೆದಿದ್ದರು. ಅವರ ತಂದೆ ಮರ್ಹೂಂ ಅಬ್ದುಲ್ಲಾ ಹಾಜಿ ಮಿತ್ತಬೈಲು ಜಮಾಅತ್ ನಲ್ಲಿ ಸತತ 30 ವರ್ಷಗಳ ಕಾಲ ಮುದರ್ರಿಸ್ ಆಗಿ ಕಾರ್ಯನಿರ್ವಹಿಸಿದ್ದರು.

- Advertisement -

ದಲಿತರು, ಮುಸ್ಲಿಮರು ಹಾಗೂ ಇತರ ಮೂಲೆಗೆ ತಳ್ಳಲ್ಪಟ್ಟ ಸಮುದಾಯಗಳು ತಮ್ಮ ಸಬಲೀಕರಣಕ್ಕಾಗಿ ಐಕ್ಯ ಹೋರಾಟವನ್ನು ನಡೆಸಬೇಕೆಂದು ಪ್ರತಿಪಾದಿಸುತ್ತಿದ್ದ ಕೆ.ಎಂ.ಶರೀಫ್ ತಮ್ಮ ಹೋರಾಟ ಮತ್ತು ಸಂಘಟನಾ ಜೀವನದುದ್ದಕ್ಕೂ ಈ ಸಮುದಾಯಗಳನ್ನು ಒಟ್ಟು ಸೇರಿಸುವುದಕ್ಕಾಗಿ ಪ್ರಯತ್ನಿಸಿದ್ದರು. ಈ ಸಮುದಾಯಗಳ ರಾಜಕೀಯ ಸಬಲೀಕರಣವಾಗಬೇಕು ಮತ್ತು ಅದಕ್ಕಾಗಿ ಪರ್ಯಾಯ ರಾಜಕಾರಣದ ಅಗತ್ಯವಿದೆ ಎಂದು ಅವರು ಒತ್ತಿಹೇಳುತ್ತಿದ್ದರು.

ಅವರು 2003ರಲ್ಲಿ ಕರಾವಳಿ ಕರ್ನಾಟಕದ ಮುಸ್ಲಿಂ ಸಾಮಾಜಿಕ ಸಂಘಟನೆಗಳನ್ನು ಒಟ್ಟು ಸೇರಿಸಿ ಸ್ಥಾಪಿಸಲಾದ ಕರಾವಳಿ ಜನಜಾಗೃತಿ  ಒಕ್ಕೂಟ ಸಂಘಟನೆಯ ಸಂಚಾಲಕರಾಗಿದ್ದರು.

2007ರಲ್ಲಿ ‘ಪ್ರಸ್ತುತ’ ಪಾಕ್ಷಿಕದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ಕೊನೆಯವರೆಗೂ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಪತ್ರಿಕೆಯಲ್ಲಿ ಅವರು  ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಬರೆಯುತ್ತಿದ್ದರು. ಕೋಮುವಾದಿ ಫ್ಯಾಶಿಸಂ, ಬಂಡವಾಳಶಾಹಿತ್ವ, ಸಾಮ್ರಾಜ್ಯಶಾಹಿತ್ವದಿಂದಾಗಿ ದೇಶವು ಅಪಾಯಕ್ಕೆ ಸಿಲುಕುತ್ತಿರುವ ಕುರಿತು ತನ್ನ ಲೇಖನಗಳಲ್ಲಿ ಎಚ್ಚರಿಸುತ್ತಾ ಬಂದಿದ್ದರು. ‘ಪ್ರಸ್ತುತ’ ಪಾಕ್ಷಿಕದ ಮೂಲಕ ಪತ್ರಿಕೋದ್ಯಮ ಶಿಬಿರಗಳನ್ನು ನಡೆಸಿ ಹಲವು ಹೊಸ ಮುಖಗಳನ್ನು ಪತ್ರಿಕಾ ರಂಗಕ್ಕೆ ತರುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಯುವ ಪ್ರತಿಭೆಗಳನ್ನು ನಿರಂತವಾಗಿ ಓದು ಮತ್ತು ಬರಹಗಳಿಗೆ ಪ್ರೇರೇಪಿಸುತ್ತಿದ್ದರು.

ಸಮಾಜದಲ್ಲಾಗುತ್ತಿರುವ ಮಹಿಳಾ ಶೋಷಣೆಯನ್ನು ವಿರೋಧಿಸುತ್ತಿದ್ದ ಅವರು ವರದಕ್ಷಿಣೆಯು ಸಾಮಾಜಿಕ ಪಿಡುಗಾಗಿದ್ದು , ದೇಶದಲ್ಲಿ ಮಹಿಳೆಯರ ದೌರ್ಜನ್ಯ ಮತ್ತು ಶೋಷಣೆಯ ಪ್ರಮುಖ ಕಾರಣಗಳಲ್ಲೊಂದು ಎಂದು ನಿರಂತರ ಪ್ರತಿಪಾದಿಸಿದ್ದರು. ಅವರು ಬರೆದ ಪುಸ್ತಕಗಳಲ್ಲಿ ‘ಶಾಂತಿಗಾಗಿ ವಿವಾಹ’ ಎಂಬ ಸಂಶೋಧನಾ ಕೃತಿ ಪ್ರಮುಖವಾಗಿದೆ. ದೇಶಾದ್ಯಂತ ವರದಕ್ಷಿಣೆ ಹೇಗೆ ಜಾರಿಯಲ್ಲಿದೆ ಮತ್ತು ಯಾವ ರೀತಿಯಲ್ಲಿ ಮಹಿಳಾ ದೌರ್ಜನ್ಯಕ್ಕೆ ಅಸ್ತ್ರವಾಗಿದೆ ಎಂಬುದನ್ನು ವಸ್ತುನಿಷ್ಠವಾಗಿ ಈ ಪುಸ್ತಕದಲ್ಲಿ ವಿವರಿಸಿದ್ದರು. ಅವರು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆ.ಎಫ್.ಡಿ)ಯ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ವರದಕ್ಷಿಣೆ ವಿರೋಧಿ ಅಭಿಯಾನಗಳನ್ನು ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು ಮತ್ತು ಸರಳ ವಿವಾಹಗಳನ್ನು ಆಯೋಜಿಸಿ ವರದಕ್ಷಿಣೆ ರಹಿತ ವಿವಾಹವಾಗಲು ಯುವಕರನ್ನು ಪ್ರೋತ್ಸಾಹಿಸಿತ್ತು.

2006ರಲ್ಲಿ  ಕೆ.ಎಂ.ಶರೀಫ್  ಕೆ.ಎಫ್.ಡಿ ವತಿಯಿಂದ ಕರ್ನಾಟಕದಾದ್ಯಂತ ನಡೆದ ‘ಕೋಮುವಾದಿ ಫ್ಯಾಶಿಸ್ಟರಿಂದ ಕರ್ನಾಟಕವನ್ನು ರಕ್ಷಿಸಿ’ ಎಂಬ ಅಭಿಯಾನದ ನೇತೃತ್ವವನ್ನು ವಹಿಸಿದ್ದರು.  ಅಭಿಯಾನದ ಸಮಾರೋಪದ ಅಂಗವಾಗಿ ಬೆಂಗಳೂರಿನಲ್ಲಿ ‘ವಿಧಾನ ಸೌಧ ಚಲೊ’ ಜಾಥಾ ಹಾಗೂ ಸಮಾವೇಶ ನಡೆದಿದ್ದು, ಕೆ.ಎಂ. ಶರೀಫ್ ನೇತೃತ್ವದ ನಿಯೋಗವು ಅಂದಿನ ಮುಖ್ಯಮಂತ್ರಿ ಕುಮಾರ ಸ್ವಾಮಿಯನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿತ್ತು. ಕರಾವಳಿ ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳಾಗುತ್ತಿರುವ ಸಂದರ್ಭದಲ್ಲಿ ನಡೆದ ಈ ಐತಿಹಾಸಿಕ ಅಭಿಯಾನವು ಕೆ.ಎಫ್.ಡಿ ಸಂಘಟನೆಯು ಕರ್ನಾಟಕದಲ್ಲಿ ಮನೆಮಾತಾಗಲು ಕಾರಣವಾಗಿತ್ತು. 

ಯಾವುದೇ ಪ್ರಚಾರವನ್ನು ಬಯಸದ ನೇರ ನಡೆನುಡಿಯ ಕೆ.ಎಂ.ಶರೀಫ್ ಶಿಸ್ತಿನ ವ್ಯಕ್ತಿತ್ವವನ್ನು ಹೊಂದಿದ್ದರು. ಅವರು ಹೋರಾಟ ರಂಗದಲ್ಲಿ ಕ್ರಿಯಾಶೀಲರಾದ ಇತರ ನಾಯಕರುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ದಲಿತ ನಾಯಕರು,  ಪ್ರಗತಿಪರರು, ಮಾನವ ಹಕ್ಕು ಹೋರಾಟಗಾರರು,  ಚಿಂತಕರು, ಸಾಹಿತಿಗಳೊಂದಿಗೆ ನಿರಂತರ ಒಡನಾಟವನ್ನು ಹೊಂದಿದ್ದರು. ದ್ವಿತೀಯ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ‘ಮುಸ್ಲಿಮರ ಶಿಕ್ಷಣ ಮತ್ತು ಸಬಲೀಕರಣ’ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದ ಅವರು ಆಗಲೇ ಮುಸ್ಲಿಂ ಸಬಲೀಕರಣದ ಕುರಿತ ಚಿಂತನೆ ಮತ್ತು ದೂರದೃಷ್ಟಿಯನ್ನು ಹೊಂದಿದ್ದರು.

ಕೆ.ಎಂ.ಶರೀಫ್ ರವರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.

Join Whatsapp