Home ಕ್ರೀಡೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ: ಕನ್ನಡಿಗ ಕೆಎಲ್ ರಾಹುಲ್ ಟೀಮ್ ಇಂಡಿಯಾ ಉಪ ನಾಯಕ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ: ಕನ್ನಡಿಗ ಕೆಎಲ್ ರಾಹುಲ್ ಟೀಮ್ ಇಂಡಿಯಾ ಉಪ ನಾಯಕ

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಅಲಭ್ಯರಾದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಉಪನಾಯಕನ ಜವಾಬ್ದಾರಿ ಕನ್ನಡಿಗ ಕೆಎಲ್ ರಾಹುಲ್  ಹೆಗಲೇರಿದೆ. ಅಭ್ಯಾಸದ ವೇಳೆ ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿರುವ ರೋಹಿತ್ ಶರ್ಮಾ ಸದ್ಯ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ BCCI, ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೆ ಎಲ್ ರಾಹುಲ್ ಟೀಮ್ ಇಂಡಿಯಾದ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಮಾಹಿತಿ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅಜಿಂಕ್ಯ ರಹಾನೆ ಬದಲು ರೋಹಿತ್ ಶರ್ಮಾರನ್ನು ಉಪನಾಯಕನಾಗಿ ನೇಮಿಸಲಾಗಿತ್ತು. ಆದರೆ ರೋಹಿತ್ ಬದಲಿಗೆ ಪ್ರಿಯಾಂಕ್ ಪಂಚಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೆಸ್ಟ್ ಸರಣಿಗಾಗಿ ಈಗಾಗಲೇ ಆಫ್ರಿಕಾ ತಲುಪಿರುವ 18 ಆಟಗಾರರನ್ನು ಒಳಗೊಂಡ ಟೀಮ್ ಇಂಡಿಯಾ,  ಪ್ರಿಟೋರಿಯಾದಲ್ಲಿ ವಾಸ್ತವ್ಯ ಹೂಡಿದೆ.

ನ್ಯೂಜಿಲೆಂಡ್ ವಿರುದ್ಧ T-20 ಮತ್ತು ಟೆಸ್ಟ್ ಸರಣಿಗಳಲ್ಲಿ ಗೆದ್ದು ಬೀಗಿರುವ ಟೀಮ್ ಇಂಡಿಯಾ, ಹರಿಣಗಳ ನೆಲದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲುವನ್ನು ದಾಖಲಿಸುವ ಉತ್ಸಾಹದಲ್ಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ವೇಳಾಪಟ್ಟಿ

ಮೊದಲ ಟೆಸ್ಟ್‌: ಡಿಸೆಂಬರ್ 26-30, ಸೂಪರ್‌’ಸ್ಪೋರ್ಟ್ಸ್ ಪಾರ್ಕ್‌, ಸೆಂಚುರಿಯನ್

ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನೆಸ್’ಬರ್ಗ್

ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್‌’ಟೌನ್

Join Whatsapp
Exit mobile version