18ನೇ ಆವೃತ್ತಿಯ ಐಪಿಎಲ್ ಮತ್ತೊಂದು ರಣರೋಚಕ ಪಂದ್ಯಕ್ಕೆ ಸಾಕ್ಷಿ ಆಗಿದೆ. ಮಂಗಳವಾರ ನಡೆದ ಐಪಿಎಲ್ನ 31ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಅತ್ಯಂತ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೆ ಅತ್ಯಂತ ಕಡಿಮೆ ಸ್ಕೋರ್ ಅನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡ ತಂಡವಾಗಿ ಪಂಜಾಬ್ ದಾಖಲೆ ಬರೆದಿದೆ.
ಮುಲ್ಲನ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಕೆಕೆಆರ್ ಬೌಲರ್‌ಗಳು ಪಂಜಾಬ್ ಬ್ಯಾಟ್ಸ್‌ಮನ್‌ಗಳ ಮೇಲೆ ಮಾರಕ ದಾಳಿ ಮಾಡಿದರು
ಇದರಿಂದ ತತ್ತರಿಸಿದ ಪಂಜಾಬ್ ತಂಡ ಕೇವಲ 111 ರನ್‌ಗಳಿಗೆ ಸರ್ವಪತನ ಕಂಡಿತು. ಪಂಜಾಬ್ ಬ್ಯಾಟ್ಸ್‌ಮನ್‌ಗಳ ಪೈಕಿ ಪ್ರಭು ಸಿಮ್ರಾನ್ ಸಿಂಗ್ 30, ಪ್ರಿಯಾಂಶ್ ಆರ್ಯ 22 ಮತ್ತು ಶಶಾಂಕ್ ಸಿಂಗ್ 18 ರನ್ ಗಳಿಸಿದರು. ಕೆಕೆಆರ್ ಪರ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರೆ, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು.
ಸೂಪರ್ ಫಾರ್ಮ್ ನಲ್ಲಿರುವ ಕೋಲ್ಕತ್ತಾ ತಂಡ ಈ ಅಲ್ಪಮೊತ್ತದ ಸ್ಕೋರ್ ಅನ್ನು ಸುಲಭವಾಗಿ ಚೇಸಿಂಗ್ ಮಾಡು ನಿರೀಕ್ಷೆಯಲ್ಲಿತ್ತು. ಆದರೆ ಪಂಜಾಬ್ ತಂಡ ಅದ್ಭುತ ಬೌಲಿಂಗ್ ಮೂಲಕ ಕೆಕೆಆರ್ ತಂಡವನ್ನೂ ಧೂಳೀಪಟ ಮಾಡಿತು.
ಕೆಕೆಆರ್ನ ಆರಂಭಿಕ ಬ್ಯಾಟರ್ ಸುನಿಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಸಿಂಗಲ್ ಡಿಜಿಟ್ಗೆ ಸೀಮಿತರಾದರು. ಅಂಗ್‌ಕ್ರಿಶ್ ರಘುವಂಶಿ 37 ರನ್‌ಗಳ ಇನ್ನಿಂಗ್ಸ್ ಪಂದ್ಯಕ್ಕೆ ಜೀವ ತುಂಬಿತು. ರಹಾನೆ ಕೂಡ 17 ರನ್ ಗಳಿಸಿದರು. ಆದರೆ ಈ ಇಬ್ಬರ ವಿಕೆಟ್ ಉರುಳತ್ತಿದ್ದಂತೆ ಪಂಜಾಬ್ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು.