Home ಕ್ರೀಡೆ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಕೀರನ್‌ ಪೊಲಾರ್ಡ್‌ 

ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಕೀರನ್‌ ಪೊಲಾರ್ಡ್‌ 

ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಆಲ್‌ರೌಂಡರ್‌ ಕೀರನ್‌ ಪೊಲಾರ್ಡ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ, ಐಪಿಎಲ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.

ಐಪಿಎಲ್‌ನ 16ನೇ ಆವೃತ್ತಿಗೂ ಮುಂಚಿತವಾಗಿ ಐಪಿಎಲ್‌ ಮಿನಿ ಹರಾಜು ಡಿಸೆಂಬರ್‌ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು, ತಮ್ಮಲ್ಲೇ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿದೆ.

ಅಚ್ಚರಿ ಎಂಬಂತೆ  2010ರಿಂದಲೂ ಮುಂಬೈ ತಂಡದ ಪ್ರಮುಖ ಆಲ್‌ರೌಂಡರ್‌ ಆಗಿದ್ದ ಕಿರಾನ್‌ ಪೊಲಾರ್ಡ್‌ರನ್ನು ಮುಂಬೈ ತಂಡದಿಂದ ಬಿಡುಗಡೆಗೊಳಿಸಿತ್ತು. ಇದರ ಬೆನ್ನಲ್ಲೇ ಐಪಿಎಲ್‌ನಿಂದ ನಿವೃತ್ತಿಯಾಗುತ್ತಿರುವುದಾಗಿ ಪೊಲಾರ್ಡ್‌ ಘೋಷಿಸಿದ್ದಾರೆ.

ʻಮುಂಬೈ ತಂಡದಲ್ಲಿ ನನಗೆ ಸ್ಥಾನವಿಲ್ಲದಿದ್ದರೆ, ಆ ತಂಡದ ವಿರುದ್ಧ ಆಡುವುದನ್ನು ಕಲ್ಪಿಸಿಕೊಳ್ಳಲೂ ನನಗೆ ಸಾಧ್ಯವಿಲ್ಲ. ಒಮ್ಮೆ ಮುಂಬೈ ತಂಡದವನಾದರೆ, ಯಾವತ್ತಿಗೂ ಮುಂಬೈ ತಂಡದವನಾಗಿರುವೆ. ಕೆಲವೊಂದು ಬದಲಾವಣೆಗಳಿಗೆ ಮುಂಬೈ ಇಂಡಿಯನ್ಸ್‌ ಮುಂದಾಗಿದೆ. ಇದರ ಅಗತ್ಯವೂ ಇದೆ. ನಾನು ಫ್ರಾಂಚೈಸಿ ಜೊತೆಗೆ ಚರ್ಚಿಸಿದ ನಂತರ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿದ್ದೇನೆ ಎಂದು ಪೊಲಾರ್ಡ್‌ ಹೇಳಿದ್ದಾರೆ .

ಆಟಗಾರನಲ್ಲದಿದ್ದರೂ ಹೊಸ ಪಾತ್ರದಲ್ಲಿ ಪೊಲಾರ್ಡ್‌ ಮುಂಬೈ ಇಂಡಿಯನ್ಸ್‌ ಭಾಗವಾಗಲಿದ್ದಾರೆ. ಸದ್ಯದಲ್ಲಿಯೇ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ಪೊಲಾರ್ಡ್‌ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಯುಎಇ ಲೀಗ್‌ನಲ್ಲಿ ಮುಂಬೈ ಎಮಿರೆಟ್ಸ್‌ ತಂಡದಲ್ಲಿ ಆಟಗಾರನಾಗಿಯೇ ಪೊಲಾರ್ಡ್‌ ಮುಂದುವರಿಯಲಿದ್ದಾರೆ.

ʻಕಳೆದ 13 ಆವೃತ್ತಿಗಳಲ್ಲಿ ಐಪಿಎಲ್‌ನ ಅತಿ ದೊಡ್ಡ ಮತ್ತು ಅತ್ಯಂತ ಯಶಸ್ವಿ ತಂಡವನ್ನು ಪ್ರತಿನಿಧಿಸಿರುವುದು ಹೆಮ್ಮೆ, ಗೌರವದ ವಿಷಯವಾಗಿದೆ. ಈ ಅದ್ಭುತ ತಂಡಕ್ಕಾಗಿ ಆಡುವುದು ಯಾವಾಗಲೂ ನನ್ನ ಬಯಕೆಯಾಗಿತ್ತು. ಐಪಿಎಲ್‌ನ ಹಾರ್ಡ್‌ಕೋರ್‌ ಅಭಿಮಾನಿಗಳ ಎದುರು, ವಿಶ್ವದ ಅತ್ಯುತ್ತಮ ಆಟಗಾರರ ಜೊತೆ ಆಡಿದ ಸಂದರ್ಭವನ್ನು ಮರೆಯಲು ಸಾಧ್ಯವಿಲ್ಲ. 2011 ಮತ್ತು 2013 ರಲ್ಲಿ ಚಾಂಪಿಯನ್ಸ್ ಲೀಗ್ ಮತ್ತು 2013, 2015, 2017, 2019 ಮತ್ತು 2020 ರಲ್ಲಿ ಐಪಿಎಲ್‌ನಲ್ಲಿ ಚಾಂಪಿಯನ್‌ ಆಗಿರುವುದು ಹೆಮ್ಮೆಯ ವಿಷಯ ಎಂದು ಪೊಲಾರ್ಡ್‌ ವಿದಾಯ ಪತ್ರದಲ್ಲಿ ಹೇಳಿದ್ದಾರೆ.

Join Whatsapp
Exit mobile version