ಬೆಂಗಳೂರು: ಪತ್ನಿಯೊಂದಿಗೆ ಸುಖ ಸಂಸಾರ ನಡೆಸಲು ಪತಿ ರಾತ್ರಿ ಹಗಲೆನ್ನದೆ ದುಡಿದು ಆಯಾಸಗೊಳ್ಳುತ್ತಾನೆ, ಆದರೆ ಇಲ್ಲೊಬ್ಬ ಪತಿ, ತನ್ನ ಪತ್ನಿಯನ್ನು ಖುಷಿಯಾಗಿಸಲು ಹುಡುಕಿದ ದಾರಿಯೇ ಬೇರೆ ! ರಾಜಸ್ಥಾನದ ಖತರ್ನಾಕ್ ಕಳ್ಳನ ಐಶಾರಾಮೀ ಜೀವನದ ಸತ್ಯಾಸತ್ಯತೆ ಬಯಲಾಗಿದೆ. ಪತ್ನಿಯ ಜತೆ ಜಾಲಿ ರೈಡ್ ಗಾಗಿ 33 ಕಡೆ ಸರ ಎಗರಿಸಿದ್ದ ಐಶಾರಾಮಿ ಕಳ್ಳ ಸದ್ಯ ಬೆಂಗಳೂರು ಪೊಲೀಸರ ವಶದಲ್ಲಿದ್ದಾನೆ.
ರಾಜಸ್ಥಾನ ಮೂಲದ ಉಮೇಶ್ ಖತಿಕ್, ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯೋರ್ವಳನ್ನು ಪ್ರೀತಿಸಿ ಮದುವೆಯಾಗಿದ್ದ. ಅರಂಭದಿಂದಲೂ ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದ ಭೂಪ ಅಪ್ರಾಪ್ತಳ ವರಿಸಿದ್ದಕ್ಕಾಗಿ ಜೈಲು ಸೇರಿ ಬಿಡುಗಡೆಯಾಗಿದ್ದ. ಪತ್ನಿಯ ಜೊತೆ ಜಾಲಿ ರೇಡ್’ನ ಹುಚ್ಚಿಗೆ ರಾಜಸ್ಥಾನದ ಕೆಲವಡೆ ರಸ್ತೆ ಬದಿ ನಡೆದುಕೊಂಡು ಹೋಗುವ ಮಹಿಳೆಯರ ಸರ ಕದ್ದು ಕೇಸನ್ನು ಜಡಿಸಿಕೊಂಡಿದ್ದ. ಆ ಬಳಿಕ ಕದಿಯುವ ಕಾರ್ಯಸ್ಥಾನವನ್ನೇ ಬದಲಿಸಿ ಸೀದಾ ರಾಜಧಾನಿ ಬೆಂಗಳೂರಿನ ಕಡೆ ಮುಖ ಮಾಡಿದ್ದಾನೆ.
ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಉಮೇಶ್, ದ್ವಿಚಕ್ರ ವಾಹನ ಕದ್ದು ಅದೇ ವಾಹನದಲ್ಲಿ ತಿರುಗಾಡಿ ರಸ್ತೆ ಬದಿ ಓಡಾಡುವ ಮಹಿಳೆಯರ ಸರ ಕದ್ದು ಪರಾರಿಯಾಗುತ್ತಿದ್ದ ಎನ್ನಲಾಗಿದೆ. ಚನ್ನಮ್ಮನ ಕೆರೆ ಅಚ್ಚುಕಟ್ಟು, ಪುಟ್ಟೇನಹಳ್ಳಿ, ಮಾರತಹಳ್ಳಿ ಸೇರಿದಂತೆ ಒದೇ ದಿನ ಮೂರು ಕಡೆ ಮಹಿಳೆಯರ ಸರ ಎಗರಿಸಿ ಪರಾರಿಯಾಗಿದ್ದ.
ಮಹಿಳೆಯ ಸರ ಕದ್ದಿದ್ದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ರಾಜಸ್ಥಾನದಲ್ಲಿ ತಂಗಿದ್ದ ಉಮೇಶ್ ಖತಿಕ್ ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ ಬಳಿಕ ತನ್ನ ಖತರ್’ನಾಕ್ ಪ್ರೇಮ್ ಕಹಾನಿಯನ್ನು ಬಹಿರಂಗಪಡಿಸಿದ್ದಾನೆ. ಒಮ್ಮೆ ಕಳ್ಳತನ ಮಾಡಿ ಹೋದ್ರೆ ಅರು ತಿಂಗಳು ವಾಪಸಾಗುತ್ತಿರಲಿಲ್ಲ, ಕದ್ದ ಚಿನ್ನ ಮಾರಾಟದಿಂದ ಬಂದ ಹಣದಲ್ಲಿ ಗಂಡ ಹೆಂಡತಿ ಮಜಾ ಮಾಡುತ್ತಿದ್ದೆವು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.