ಪಾಟಿಯಾಲ: ಪಾಟಿಯಾಲದಲ್ಲಿ ನಡೆದ ಹಿಂಸಾಚಾರದ ಮುಖ್ಯ ಸಂಚುಕೋರ ಎಂಬ ಆರೋಪದಲ್ಲಿ ದಮ್ದಮಿ ಸಿಖ್ ಗುಂಪಿನ ನಾಯಕ ಬರ್ಜಿಂದರ್ ಸಿಂಗ್ ಪರ್ವಾನಾ ಎಂಬಾತನನ್ನು ಬಂಧಿಸಲಾಗಿದೆ ಎಂದು ಪಾಟಿಯಾಲ ವಲಯ ಪೊಲೀಸ್ ಮಹಾನಿರ್ದೇಶಕ ಎಂ.ಎಸ್. ಚಿನಾ ತಿಳಿಸಿದ್ದಾರೆ.
ಬರ್ಜಿಂದರ್ ಸಿಂಗ್ ನನ್ನು ಮೊಹಾಲಿಯಿಂದ ಬಂಧಿಸಲಾಗಿದೆ.
ಶಿವಸೇನೆ (ಬಾಳಾ ಠಾಕ್ರೆ) ಶುಕ್ರವಾರ ಕರೆ ನೀಡಿದ್ದ ಖಲಿಸ್ತಾನ ವಿರೋಧಿ ಜಾಥಾದ ವೇಳೆ ಘರ್ಷಣೆ ನಡೆದಿತ್ತು. ಸಿಖ್ ಕಾರ್ಯಕರ್ತರು ಮತ್ತು ನಿಹಾಂಗ್ ಕಾರ್ಯಕರ್ತರು ಖಡ್ಗ ಪ್ರದರ್ಶಿಸಿದರು. ಉಭಯ ಕಡೆಗಳಿಂದಲೂ ಕಲ್ಲು ತೂರಾಟ ನಡೆದಿತ್ತು. ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸಹಿತ ನಾಲ್ವರು ಗಾಯಗೊಂಡಿದ್ದರು.
ಘರ್ಷಣೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬರ್ಜಿಂದರ್ ಸಿಂಗ್ ನನ್ನು ಪೊಲೀಸರು ಈಗ ಬಂಧಿಸಿದ್ದಾರೆ. ಖಲಿಸ್ತಾನ್ ಮುರ್ದಾಬಾದ್ ಜಾಥಾ ಆಯೋಜಿಸಿದ್ದ ಹರೀಶ್ ಸಿಂಗ್ ಎಂಬಾತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.