Home ಟಾಪ್ ಸುದ್ದಿಗಳು ಗಂಡ ಮಾನಸಿಕ ಅಸ್ವಸ್ಥನಾಗಲು ಆರು ವರ್ಷಗಳ ಕಾಲ ಆಹಾರದಲ್ಲಿ ಮಾತ್ರೆ ಬೆರೆಸಿ ನೀಡಿದ ಪತ್ನಿ ಕೊನೆಗೂ...

ಗಂಡ ಮಾನಸಿಕ ಅಸ್ವಸ್ಥನಾಗಲು ಆರು ವರ್ಷಗಳ ಕಾಲ ಆಹಾರದಲ್ಲಿ ಮಾತ್ರೆ ಬೆರೆಸಿ ನೀಡಿದ ಪತ್ನಿ ಕೊನೆಗೂ ಅರೆಸ್ಟ್ !

ಕೋಟ್ಟಯಂ: ತನ್ನ ಗಂಡನ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಮಹಿಳೆಯೊಬ್ಬಳು, ಪತಿ ಮಾನಸಿಕ ಅಸ್ವಸ್ಥನಾಗಲು 6 ವರ್ಷಗಳ ಕಾಲ ಆಹಾರದಲ್ಲಿ ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ಔಷಧಗಳನ್ನು ಬೆರೆಸಿ ನೀಡುತ್ತಿದ್ದ ಆಘಾತಕಾರಿ ಘಟನೆಯು ಕೇರಳದ ಪಾಲಾದಲ್ಲಿ ನಡೆದಿದೆ.

ತಿರುವನಂತಪುರಂ ಮ‌ೂಲದ ಸತೀಶ್ [ 38] ನೀಡಿದ ದೂರಿನ ಮೇರೆಗೆ ಪತ್ನಿ ಆಶಾ ಸುರೇಶ್ [ 35]ನನ್ನು ಪಾಲಾ ಪೊಲೀಸರು ಬಂಧಿಸಿದ್ದಾರೆ.

ತಮ್ಮ ಎಲ್ಲಾ ಆಸ್ತಿಯನ್ನು ಪತಿ ಸತೀಶ್ ಅವರ ಮನೆಯವರಿಗೆ ನೀಡುವ ನಿರ್ಧಾರ ಮಾಡಿದ್ದು, ಈ ಕಾರಣದಿಂದಾಗಿ ಪತಿಗೆ ನೀಡುತ್ತಿದ್ದ ಆಹಾರ ಮತ್ತು ನೀರಿನಲ್ಲಿ ಔಷಧಗಳನ್ನು ಬೆರೆಸುತ್ತಿದ್ದೆ ಎಂದು ಪೊಲೀಸರ ವಿಚಾರಣೆ ವೇಳೆ ಆಶಾ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ
ಐಸ್ ಕ್ರೀಂ ಉದ್ಯಮ ನಡೆಸುತ್ತಿದ್ದ ಸತೀಶ್, 2012ರಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಇದಾದ ಬಳಿಕ ಪತ್ನಿ ಆಶಾ ಗಂಡನ ಬಳಿ ಕ್ಷುಲ್ಲಕ ಕಾರಣಗಳಿಗಾಗಿ ಜಗಳ ಮಾಡಲು ಆರಂಭಿಸಿದ್ದಳು. ದಿನಕಳೆದಂತೆ ಸತೀಶ್ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಲಾರಂಭಿಸಿತ್ತು. ವೈದ್ಯರ ಬಳಿ‌ ಪರೀಕ್ಷಿಸಿದಾಗ ಲೋ ಶುಗರ್ ಕಾರಣ ಎಂಬುದು ಗೊತ್ತಾಗಿದೆ. ಔಷಧಗಳನ್ನು ತೆಗೆದುಕೊಂಡರೂ ಸಮಸ್ಯೆ ಬಗೆಹರಿದಿರಲಿಲ್ಲ. ಕಳೆದ ಸಪ್ಟೆಂಬರ್ ತಿಂಗಳಿನಿಂದ ಸತೀಶ್ ಮನೆಯಿಂದ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದರು. ಇದಾದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲು ಆರಂಭವಾಯಿತು. ಹೀಗಾಗಿ ಪತ್ನಿಯ ಮೇಲೆಯೇ ಸತೀಶ್’ಗೆ ಸಂಶಯ ಮೂಡಿತ್ತು.
ಬಳಿಕ ಪತ್ನಿಯ ಸ್ನೇಹಿತೆಯ ಮನವೊಲಿಸಿ ಸತೀಶ್ ತನ್ನ ಮನೆಗೆ ಕಳುಹಿಸಿದಾಗ ಬೆಚ್ಚಿ ಬೀಳಿಸುವಂತಹ ಮಾಹಿತಿ ಗೊತ್ತಾಗಿದೆ. 2015ರಿಂದಲೂ ಸತೀಶ್ ಪತ್ನಿ ಆಶಾ, ತನ್ನ ಪತಿಗೆ‌ ನೀಡುತ್ತಿದ್ದ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಔಷಧಗಳನ್ನು ಬೆರೆಸಿ ನೀಡುತ್ತಿದ್ದಳು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಆಹಾರದಲ್ಲಿ ಔಷಧ ಬೆರೆಸುವ ಫೋಟೋದ ಜೊತೆ ಸತೀಶ್ ಪೊಲೀಸರಿಗೆ ದೂರು ನೀಡಿದ್ದು, ಇದೀಗ ‌ಪತ್ನಿ ಆಶಾ ಪೊಲೀಸರ ವಶದಲ್ಲಿದ್ದಾಳೆ

Join Whatsapp
Exit mobile version