ತಿರುವನಂತಪುರಂ : 2008ರ ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ತನ್ನ ಹೆಸರನ್ನು ಅನಗತ್ಯವಾಗಿ ಎಳೆದು ತಂದ ಬಲಪಂಥೀಯ ಪತ್ರಿಕೆ, ‘ಜನ್ಮಭೂಮಿ’ ವಿರುದ್ಧ ಮಾನನಷ್ಟ ದಾವೆ ಹೂಡುವುದಾಗಿ ಕೇರಳ ಮೂಲದ ಪತ್ರಕರ್ತೆ ಕೆ.ಕೆ. ಶಹೀನಾ ಹೇಳಿದ್ದಾರೆ. ‘ದ ಫೆಡರಲ್’ ಹಿರಿಯ ಸಂಪಾದಕಿ ಕೆ.ಕೆ. ಶೈನಾ ವಿರುದ್ಧ ಮಾನಹಾನಿ ವರದಿಯನ್ನು ‘ಜನ್ಮಭೂಮಿ’ ಪ್ರಕಟಿಸಿದೆ.
ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿರುವ ವಿವಾದಿತ ಕೇರಳ ಸಚಿವ ಕೆ.ಟಿ. ಜಲೀಲ್ ಅವರೊಂದಿಗೆ ನಡೆಸಿದ್ದ ಸಂದರ್ಶನಕ್ಕೆ ಸಂಬಂಧಿಸಿ ಶಹೀನಾ ಅವರ ಮಾನಹಾನಿ ಮಾಡಲಾಗಿದೆ. “ಮಾಧ್ಯಮಗಳೊಂದಿಗೆ ಮಾತನಾಡಲು ಆಸಕ್ತಿಯಿಲ್ಲವೆಂದಿದ್ದ ಜಲೀಲ್ ‘ಜಿಹಾದಿ ಪತ್ರಕರ್ತೆ’ ಕರೆ ಮಾಡಿದ ತಕ್ಷಣ, ಸತ್ಯ ಮತ್ತು ಅಸತ್ಯವಾದುದೆಲ್ಲವನ್ನೂ ಬಾಯಿಬಿಟ್ಟರು. ಜಲೀಲ್ ಅವರೊಂದಿಗೆ ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿ ಕೆ.ಕೆ. ಶಹೀನಾ ಸಂದರ್ಶನ ನಡೆಸಿದ್ದರು’’ ಎಂದು ‘ಜನ್ಮಭೂಮಿ’ ವರದಿ ಮಾಡಿತ್ತು.
ಬಿಜೆಪಿಯ ಸಿದ್ಧಾಂತದೊಂದಿಗೆ ಹೋಲುವ, ಪತ್ರಿಕೆಯ ಮಾನಹಾನಿಕರ ವರದಿಯ ವಿರುದ್ಧ ತಾವು ಕಾನೂನು ಸಮರ ನಡೆಸುವುದಾಗಿ ಶಹೀನಾ ಹೇಳಿದ್ದಾರೆ. “ಈ ಮಾನಹಾನಿಯ ಬಗ್ಗೆ ನಾನು ನನ್ನ ವಕೀಲರ ಜೊತೆ ಮಾತನಾಡುತ್ತಿದ್ದೇನೆ. ಇದು ನನ್ನ ಕೆಲಸ ಮತ್ತು ನನಗೆ ಅಪಖ್ಯಾತಿ ಎಸಗಲು ಉದ್ದೇಶಪೂರ್ವಕವಾಗಿ ಈ ಪ್ರಯತ್ನ ನಡೆಸಲಾಗುತ್ತಿದೆ. ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೂ ನನಗೂ ಯಾವುದೇ ನಂಟಿಲ್ಲ. ಪ್ರಕರಣದಲ್ಲಿ ಆರೋಪಿ ಎಂದು ನನ್ನನ್ನು ಗುರುತಿಸಿರುವುದು ಇದೇ ಮೊದಲಲ್ಲ. ಇಲ್ಲಿ ವರೆಗೆ ನಾನು ನಿರ್ಲಕ್ಷಿಸಿದ್ದೆ. ಈಗ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ’’ ಎಂದು ಶಹೀನಾ ಹೇಳಿರುವುದಾಗಿ “ದ ನ್ಯೂಸ್ ಮಿನಿಟ್’ ವರದಿ ಮಾಡಿದೆ.
2011ರಲ್ಲಿ ಯುಎಪಿಎ ಕಾನೂನಿನಡಿ ಪ್ರಕರಣ ದಾಖಲಾದ ಮೊದಲ ಪತ್ರಕರ್ತೆ ಶಹೀನಾ. 2008ರ ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ತನಿಖೆ ಕುರಿತಂತೆ, ಇಬ್ಬರು ಆರೋಪಿಗಳೊಂದಿಗೆ ಶಹೀನಾ ನಡೆಸಿದ್ದ ಸಂದರ್ಶನ ‘ತೆಹಲ್ಕಾ’ದಲ್ಲಿ ವರದಿಯಾಗಿತ್ತು.