Home ಟಾಪ್ ಸುದ್ದಿಗಳು ಕೇರಳ | ಇಸ್ಲಾಮೋಫೋಬಿಯಾ ವಿರುದ್ಧ ಕಾನೂನು ರಚನೆಗೆ ಮುಸ್ಲಿಮ್ ಸಂಘಟನೆ ಒತ್ತಾಯ

ಕೇರಳ | ಇಸ್ಲಾಮೋಫೋಬಿಯಾ ವಿರುದ್ಧ ಕಾನೂನು ರಚನೆಗೆ ಮುಸ್ಲಿಮ್ ಸಂಘಟನೆ ಒತ್ತಾಯ

ಕೇರಳ: ದೇಶದೆಲ್ಲೆಡೆ ವ್ಯಾಪಕವಾಗುತ್ತಿರುವ ಇಸ್ಲಾಮೋಫೋಬಿಯಾವನ್ನು ತಡೆಗಟ್ಟಲು ಕಾನೂನು ರೂಪಿಸುವಂತೆ ಜಮಾತೆ ಇಸ್ಲಾಮಿ ಹಿಂದ್ ನ ಸಹ ಸಂಘಟನೆಯಾದ ಮುಸ್ಲಿಮ್ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾದ್ಯಂತ ಯುವ ಕಾರವಾನ್ ಮೂಲಕ ಆಗ್ರಹಿಸಿದೆ.

ಮೇ 5 ರಂದು ಆರಂಭವಾದ ಕಾರವಾನ್ ದಕ್ಷಿಣದೆಲ್ಲೆಡೆ ಸಂಚರಿಸಿದೆ ಮತ್ತು ಮೇ 15 ರಂದು ರಾಜಧಾನಿ ತಿರುವನಂತಪುರದಲ್ಲಿ ಸಮಾಪ್ತಿಯಾಗಿದೆ.

ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಮಾತೆ ಇಸ್ಲಾಮಿ ರಾಷ್ಟ್ರೀಯ ಕಾರ್ಯದರ್ಶಿ ಮಲಿಕ್ ಮುಹ್ ತಿಸಿಮ್ ಖಾನ್, ದ್ವೇಷದ ಅಪರಾಧ ಕೃತ್ಯಗಳಿಂದ ಮುಸ್ಲಿಮರಿಗೆ ಕಾನೂನು ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ದೇಶದೆಲ್ಲೆಡೆ ವ್ಯಾಪಕವಾಗುತ್ತಿರುವ ಇಸ್ಲಾಮೋಫೋಬಿಯಾ ಅಭಿಯಾನಗಳು ಮುಸ್ಲಿಮರ ಆರ್ಥಿಕ, ರಾಜಕೀಯ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ತಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಸ್ಲಿಮರ ಬಿಕ್ಕಟ್ಟನ್ನು ರಾಷ್ಟ್ರೀಯ ಬಿಕ್ಕಟ್ಟು ಎಂದು ಪರಿಗಣಿಸಬೇಕೆಂದು ಖಾನ್ ಆಗ್ರಹಿಸಿದ್ದಾರೆ.


ಕೇರಳ ಶಾಸಕಾಂಗ ಸಭೆಯು ಇಸ್ಲಾಮೋಫೋಬಿಯಾ ವಿರುದ್ಧ ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕೇರಳ ರಾಜ್ಯಾಧ್ಯಕ್ಷ ನಹಾಸ್ ಎ.ಎಚ್. ಆಗ್ರಹಿಸಿದ್ದಾರೆ.

“ಇತ್ತೀಚೆಗೆ ತಿರುವನಂತಪುರದಲ್ಲಿ ನಡೆದ ಮುಸ್ಲಿಂ ವಿರೋಧಿ ದ್ವೇಷ ಭಾಷಣದ ಘಟನೆಯ ಕುರಿತು ತನಿಖೆ ನಡೆಸಬೇಕಾಗಿದೆ ಮತ್ತು ಸಂಘಟಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ” ಎಂದು ಸಮಾರೋಪ ಸಮಾರಂಭದಲ್ಲಿ ಖಾನ್ ಆಗ್ರಹಿಸಿದ್ದಾರೆ.

ಈ ಮಧ್ಯೆ ಯುಎಪಿಎ ಆರೋಪಿ ಜಕಾರಿಯಾ ಅವರ ತಾಯಿ ಬೀಯುಮ್ಮ ಮತ್ತು ಪತ್ರಕರ್ತ ಸಿದ್ದಿಕ್ ಕಾಪ್ಪನ್ ಅವರ ಪತ್ನಿ ರೈಹಾನಾ ಕಾಪ್ಪನ್ ಅವರನ್ನು ತಂಡ ಭೇಟಿ ಮಾಡಿದೆ ಎಂದು ತಿಳಿದು ಬಂದಿದೆ.

ಕಾರವಾನ್ ಸದಸ್ಯರು ಫೈಸಲ್ ಕೊಡಿಂಜಿ ಮತ್ತು ಯಾಸಿರ್ ತಿರೂರ್ ಅವರ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ. ಇಸ್ಲಾಂಗೆ ಮತಾಂತರಗೊಂಡ ನಂತರ ಇವರಿಬ್ಬರನ್ನು ಸಂಘಪರಿವಾರದ ಕಾರ್ಯಕರ್ತರು ಹತ್ಯೆ ನಡೆಸಿದ್ದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಮುಸ್ಲಿಂ ಯೂತ್ ಲೀಗ್ ಮತ್ತು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನಾಯಕರು ಕಾರವಾನ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಇಸ್ಲಾಮೋಫೋಬಿಯಾವನ್ನು ಅಪರಾಧವಾಗಿ ಪರಿಗಣಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Join Whatsapp
Exit mobile version