ಹೊಸದಿಲ್ಲಿ: ಫಾದರ್ ಸ್ಟಾನ್ ಸ್ವಾಮಿಯ ಕಸ್ಟಡಿ ಸಾವಿನ ಕುರಿತು ಕೇಂದ್ರ ಸರ್ಕಾರ ನ್ಯಾಯಾಂಗ ತನಿಖೆ ನಡೆಸುವಂತೆ ಕೇರಳ ಸಂಸದ ಎ.ಎಮ್. ಆರಿಫ್ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.
“ವಯಸ್ಸಾದ ಸ್ಟ್ಯಾನ್ ಸ್ವಾಮಿಯನ್ನು ರಾಷ್ಟ್ರೀಯ ಭದ್ರತಾ ಏಜೆನ್ಸಿ ಕಠಿಣ ಯುಎಪಿಎ ಕಾನೂನು ವಿಧಿಸಿ ಜೈಲಿನಲ್ಲಿರಿಸಿತ್ತು. ಅವರಿಗೆ ಅಗತ್ಯ ಚಿಕಿತ್ಸೆ ನೀಡಿಲ್ಲ. ಜಾಮೀನು ನೀಡುವಂತೆ ಹಲವು ಸಂಘಟನೆಗಳು ಕೇಂದ್ರ ಸರ್ಕಾರವನ್ನು ಕೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಕೇಂದ್ರ ಸರ್ಕಾರ ಸೂಚನೆ ನೀಡಬೇಕು ಎಂದು ಸಂಸದರು ಈ ವೇಳೆ ಒತ್ತಾಯಿಸಿದರು. ಶಿವಸೇನೆಯ ಸಂಸದ ಸಂಜಯ್ ರಾವುತ್ ಕಳೆದ ತಿಂಗಳು ಸ್ಟ್ಯಾನ್ ಸ್ವಾಮಿಯ ಸಾವಿನ ಕುರಿತು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸ್ಟಾನ್ ಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ರಾವುತ್ ಆರೋಪ ಮಾಡಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ಮಾನವ ಹಕ್ಕುಗಳ ಹೋರಾಟಗಾರ 84 ವರ್ಷದ ಫಾದರ್ ಸ್ಟ್ಯಾನ್ ಸ್ವಾಮಿ ಜುಲೈ 5 ರಂದು ನಿಧನರಾಗಿದ್ದರು.