ಕೊಟ್ಟಾಯಂ: ಕೇರಳದ ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಬಾಲಕಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಮಹಿಳೆಯನ್ನು ತಳಯೋಲಾಪರಂಬುವಿನ ಬಿಂಧು (52) ಎಂದು ಗುರುತಿಸಲಾಗಿದೆ. ಅಲೀನಾ (11), ಅಮಲ್ ಪ್ರದೀಪ್ (20) ಜಿನು ಸಾಜಿ (38) ಗಾಯಾಳುಗಳು. ಸದ್ಯ ಗಾಯಾಳುಗಳು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬಾಲಕಿ ಅಲಿನಾ ಹಾಗೂ ಜಿನು ಸಾಜಿ ಅವರ ಪರಿಸ್ಥಿತಿ ಗಂಭೀರವಾಗಿದೆ.
ಕಟ್ಟಡ (ವಾರ್ಡುಗಳಿಗೆ ಹೊಂದಿಕೊಂಡಿದ್ದ ಟಾಯ್ಲೆಟ್ ಕಾಂಪ್ಲೆಕ್ಸ್) ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ, ಕುಸಿದ ಕಟ್ಟಡ ಹಲವು ದಶಕಗಳಷ್ಟು ಹಳೆಯದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡ ಕುಸಿದರೂ 2 ಗಂಟೆಗೂ ಹೆಚ್ಚು ನಿಧಾನವಾಗಿ ಪರಿಹಾರ ಕಾರ್ಯಾಚರಣೆ ಆರಂಭವಾಗಿದ್ದಕ್ಕೆ ಬಿಂಧು ಮೃತಪಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಘಟನೆಯನ್ನು ಖಂಡಿಸಿ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.