ಕೋಝಿಕ್ಕೋಡ್: 4 ವರ್ಷದ ಬಾಲಕಿಯ ಹೆಚ್ಚುವರಿ ಕೈ ಬೆರಳನ್ನು ತೆಗೆಯುವ ಶಸ್ತ್ರಚಿಕಿತ್ಸೆಗೆ ಬದಲಾಗಿ ಆಕೆಯ ನಾಲಿಗೆಗೆ ಶಸ್ತ್ರಚಿಕಿತ್ಸೆ ನಡೆಸಿದ ಪ್ರಮಾದ ಕೋಝಿಕ್ಕೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಿಂದ ನಡೆದಿದೆ.
ನಾಲ್ಕು ವರ್ಷದ ಮಗುವಿಗೆ ಆರು ಬೆರಳುಗಳಿದ್ದವು. ಇದರಲ್ಲಿ ಆರನೇ ಬೆರಳನ್ನು ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು.
ಆದರೆ ಬದಲಾಗಿ ಮಗುವಿನ ನಾಲಿಗೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಬಾಯಿಯಲ್ಲಿ ಹತ್ತಿ ತುಂಬಿರುವುದನ್ನು ನೋಡಿ ಪೋಷಕರು ಈ ಬಗ್ಗೆ ಪ್ರಶ್ನಿಸಿದಾಗ ತಪ್ಪು ಬೆಳಕಿಗೆ ಬಂದಿದೆ.
ಈ ಬಗ್ಗೆ ಕುಟುಂಬಸ್ಥರು ಆರೋಪಿಸಿದ್ದು ಹೆಚ್ಚಿನ ತನಿಖೆಗೆ ಆರೋಗ್ಯ ಸಚಿವೆ ವೀಣಾ ಆಗ್ರಹಿಸಿದ್ದಾರೆ. ತಕ್ಷಣ ತನಿಖೆ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.