Home ಟಾಪ್ ಸುದ್ದಿಗಳು ಉಪಕುಲಪತಿಗಳ ರಾಜೀನಾಮೆಗೆ ನಿರ್ದೇಶಿಸಿದ ಕೇರಳ ರಾಜ್ಯಪಾಲ: ಹೈಕೋರ್ಟ್’ನಲ್ಲಿ ತುರ್ತು ವಿಚಾರಣೆ

ಉಪಕುಲಪತಿಗಳ ರಾಜೀನಾಮೆಗೆ ನಿರ್ದೇಶಿಸಿದ ಕೇರಳ ರಾಜ್ಯಪಾಲ: ಹೈಕೋರ್ಟ್’ನಲ್ಲಿ ತುರ್ತು ವಿಚಾರಣೆ

ಕೊಚ್ಚಿ: ಕೇರಳದ ಒಂಬತ್ತು ವಿಶ್ವವಿದ್ಯಾಲಯಗಳ ಉಪಕುಲಪತಿಗಳು ರಾಜೀನಾಮೆ ನೀಡುವಂತೆ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ನಿರ್ದೇಶಿಸಿದ ಬೆನ್ನಲ್ಲೇ, ಇದನ್ನು ಪ್ರಶ್ನಿಸಿ ಹೈಕೋರ್ಟ್’ಗೆ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಗಣಿಸಲು ಇಂದು ಸಂಜೆ 4 ಗಂಟೆಗೆ ವಿಚಾರಣೆ ನಡೆಯಲಿದೆ.

ಇತ್ತೀಚೆಗೆ ವಿಶ್ವವಿದ್ಯಾನಿಲಯದ ಅನುದಾನ ಆಯೋಗದ (ಯುಜಿಸಿ) ನಿಯಮಗಳನ್ನು ಪಾಲಿಸದೆ ನೇಮಕಗೊಳಿಸಿರುವ ಕಾರಣ ತಿರುವನಂತಪುರದ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯ ನೇಮಕಾತಿಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದೇ ತೀರ್ಪನ್ನೇ ಬಳಸಿಕೊಂಡು ಆದೇಶ ನೀಡಿರುವ ರಾಜ್ಯಪಾಲರು, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಸೇರಿದಂತೆ ಒಂಬತ್ತು ವಿವಿಗಳ ಕುಲಪತಿಗಳಿಗೆ ಸೋಮವಾರ ಬೆಳಗ್ಗೆ 11.30ರೊಳಗೆ ರಾಜೀನಾಮೆ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದು ಕೇರಳ ರಾಜಭವನದ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿತ್ತು.

ಕೆಲವು ದಿನಗಳಿಂದ ಕೇರಳ ಸರಕಾರ ಮತ್ತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ರ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಈ ನಡುವೆ ರಾಜ್ಯಪಾಲರು “ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ” ಎಂದು ಕೇರಳದ 9 ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಆದೇಶಿಸಿದ್ದರು.

ರಾಜ್ಯಪಾಲ ಮುಹಮ್ಮದ್ ಆರೀಫ್ ಖಾನ್ ಅವರ ನಡೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅವರ ಆದೇಶವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಪರಿಗಣಿಸುವ ನಿಟ್ಟಿನಲ್ಲಿ ಇಂದು ಸಂಜೆ 4 ಗಂಟೆಗೆ ಹೈಕೋರ್ಟ್’ನ ತುರ್ತು ವಿಚಾರಣೆ ನಡೆಯಲಿದೆ.

Join Whatsapp
Exit mobile version