ಕೇರಳ | ಪತ್ರಕರ್ತ ಸಿದ್ದೀಕ್ ಕಾಪ್ಪನ್ ಬಂಧನಕ್ಕೆ ಎರಡು ವರ್ಷ; ಬಿಜೆಪಿಯ ಬೆದರಿಕೆಯಿಂದಾಗಿ ಕಾರ್ಯಕ್ರಮ ರದ್ದು

Prasthutha|

ಕೊಚ್ಚಿ: ಸುಳ್ಳು ಪ್ರಕರಣದಲ್ಲಿ UAPA ಕಾಯ್ದೆ ಅಡಿಯಲ್ಲಿ ಬಂಧಿತರಾಗಿ ಕಳೆದ ಎರಡು ವರ್ಷಗಳಿಂದ ಉತ್ತರ ಪ್ರದೇಶದ ಜೈಲಿನಲ್ಲಿರುವ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರನ್ನು ಬೆಂಬಲಿಸಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಬಿಜೆಪಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸಂಘಟಕರು ರದ್ದುಗೊಳಿಸಿದ್ದಾರೆ.

- Advertisement -

ಕ್ಯಾಲಿಕಟ್’ನ ಟೌನ್’ಹಾಲ್’ನಲ್ಲಿ ಈ ಕಾರ್ಯಕ್ರಮ ನಡೆಯಬೇಕಾಗಿತ್ತು. ಸಂಸದ ಎಂ.ಕೆ ರಾಘವನ್ ಮತ್ತು ಮುಸ್ಲಿಮ್ ಲೀಗ್ ಮುಖಂಡ ಪಾಣಕ್ಕಾಡ್ ಮುನವ್ವರ್ ಅಲಿ ಶಿಹಾಬ್ ತಂಙಲ್ ಸೇರಿದಂತೆ ಹಲವಾರು ಭಾಷಣಕಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿದ್ದರು.

ನಾಗರಿಕ ಹಕ್ಕುಗಳ ಒಕ್ಕೂಟ ಎಂಬ ಬ್ಯಾನರ್ ಅಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ತಲೆದೋರುವ ಕುರಿತು ಪೊಲೀಸರು ಎಚ್ಚರಿಸಿದ ಬಳಿಕ ಈ ಕಾರ್ಯಕ್ರಮವನ್ನು ರದ್ದುಗೊಳಿಸುತ್ತಿದ್ದೇವೆ ಎಂದು ಸಂಘಟಕ ಮತ್ತು ಹಿರಿಯ ಪತ್ರಕರ್ತ ಎನ್.ಪಿ. ಚೆಕುಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

- Advertisement -

ನಮ್ಮ ಅಂತಿಮ ಗುರಿ ಸಿದ್ದೀಕ್ ಕಾಪ್ಪನ್ ಅವರನ್ನು ಬಿಡುಗಡೆಗೊಳಿಸುವುದಾಗಿದೆ. ಜೈಲಿನಿಂದ ಹೊರಬರುವ ಅವಕಾಶಕ್ಕೆ ಅಡ್ಡಿಪಡಿಸುವ ಯಾವುದೇ ಪ್ರಚೋದನಕಾರಿ ಘಟನೆಗಳಿಂದ ನಾವು ಸಹನೆಯನ್ನು ಪಾಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕೇರಳದ ಶಾಸಕರಾದ ಪಿ ಉಬೈದುಲ್ಲಾ, ಕೆ ಕೆ ರೆಮಾ, ಹಿರಿಯ ಪತ್ರಕರ್ತರು, ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಮುಖಂಡರು ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಮಾತನಾಡಬೇಕಿತ್ತು.

Join Whatsapp