Home ಟಾಪ್ ಸುದ್ದಿಗಳು ಲಕ್ಷದ್ವೀಪ ಆಡಳಿತಾಧಿಕಾರಿಯ ಜನ ವಿರೋಧಿ ನೀತಿ | ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಲಕ್ಷದ್ವೀಪ ಆಡಳಿತಾಧಿಕಾರಿಯ ಜನ ವಿರೋಧಿ ನೀತಿ | ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ತಿರುವನಂತಪುರ : ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ “ಜನ ವಿರೋಧಿ” ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರಿಗೆ ಬೆಂಬಲವಾಗಿ ಕೇರಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ಣಯ ಮಂಡಿಸಿದ್ದು, ದ್ವೀಪವಾಸಿಗಳ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸುವಂತೆ ಈ ನಿರ್ಣಯದಲ್ಲಿ ಕೇಂದ್ರವನ್ನು ಒತ್ತಾಯಿಸಲಾಗಿದೆ.

ವಿಧಾನಸಭೆಯಲ್ಲಿ ಇಂದು ನಿರ್ಣಯ ಹೊರಡಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದ್ವೀಪ ಸಮೂಹದಲ್ಲಿನ ಸ್ಥಳೀಯ ಜೀವನಶೈಲಿ ಮತ್ತು ಪರಿಸರ ವ್ಯವಸ್ಥೆಯನ್ನು ನಾಶಮಾಡುವ ‘ಕೇಸರಿ ಕಾರ್ಯಸೂಚಿಯನ್ನು’ ಜಾರಿಗೆ ತರುವ ಪ್ರಯತ್ನ ಲಕ್ಷದ್ವೀಪದಲ್ಲಿ ನಡೆಯುತ್ತಿದೆ, ಈ ಮೂಲಕ ಸ್ಥಳೀಯ ಜನರ ಜೀವನದ ಹಕ್ಕನ್ನು ನಿಯಂತ್ರಿಸಲಾಗುತ್ತಿದೆ. ಈ ಅಜೆಂಡಾದ ಭಾಗವಾಗಿ ಅಲ್ಲಿ ತೆಂಗಿನ ಮರಗಳನ್ನು ಕೇಸರಿ ಬಣ್ಣದಿಂದ ಚಿತ್ರಿಸಲಾಗುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದರು.

ಲಕ್ಷದ್ವೀಪದಲ್ಲಿ ಕೇಸರಿ ಕಾರ್ಯಸೂಚಿ ಮತ್ತು ಸಾಂಸ್ಥಿಕ ಹಿತಾಸಕ್ತಿಗಳನ್ನು ಹೇರಲು ಮತ್ತು ಜಾರಿಗೆ ತರಲು ಪ್ರಯತ್ನ ನಡೆಯುತ್ತಿದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದರು. ಕೇಂದ್ರ ಸರ್ಕಾರ ತಕ್ಷಣವೇ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಬೇಕು, ಲಕ್ಷದ್ವೀಪ ಜನರ ಹಿತಾಸಕ್ತಿ ಕಾಪಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

“ಭೂಮಿ ಮತ್ತು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಲಕ್ಷದ್ವೀಪ ಆಡಳಿತಕ್ಕೆ ಅಸಾಧಾರಣ ಅಧಿಕಾರವನ್ನು ನೀಡುವ ಕ್ರಮ” ಕೇರಳ ವಿಧಾನಸಭೆಯಲ್ಲಿ ತೀವ್ರ ವಾಗ್ದಾಳಿಗೆ ಗುರಿಯಾಯಿತು. ಆಡಳಿತಾಧಿಕಾರಿ ಪಟೇಲ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಮತ್ತು ಅವರ ವಿವಾದಾತ್ಮಕ ಆದೇಶಗಳನ್ನು ಹಿಂಪಡೆಯಬೇಕು ಎಂದು ಶಾಸಕರು ಒತ್ತಾಯಿಸಿದರು. ಈ ನಿರ್ಣಯವನ್ನು ವಿಧಾನಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು.

ಈ ಬಾರಿಯ ವಿಧಾಸಭೆ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರ ಬಂದ ಮೇಲೆ ವಿಧಾನಸಭೆಯಲ್ಲಿ ಮಂಡಿಸಲಾದ ಮೊದಲ ನಿರ್ಣಯವಾಗಿದೆ.

Join Whatsapp
Exit mobile version