Home ಟಾಪ್ ಸುದ್ದಿಗಳು ಭಾರತ ಮಾತೆ ನೋವಿನಲ್ಲಿದ್ದಾಳೆ ಎಂದ ಕೇಜ್ರಿವಾಲ್‌ ಪತ್ನಿ ಸುನೀತಾ

ಭಾರತ ಮಾತೆ ನೋವಿನಲ್ಲಿದ್ದಾಳೆ ಎಂದ ಕೇಜ್ರಿವಾಲ್‌ ಪತ್ನಿ ಸುನೀತಾ

ನವದೆಹಲಿ: ಭಾರತ ಮಾತೆ ನೋವಿನಲ್ಲಿದ್ದಾಳೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಪತ್ನಿ ಸುನೀತಾ ಹೇಳಿದ್ದಾರೆ.

ತನಿಖಾ ಸಂಸ್ಥೆಗಳನ್ನು , ಆದಾಯ ತೆರಿಗೆ ಇಲಾಖೆಗಳನ್ನು ದುರುಪಯೋಗಪಡಿಸಿ ಪ್ರತಿಪಕ್ಷಗಳನ್ನು ಮಣಿಸುವ ಕೇಂದ್ರ ಸರಕಾರದ ನಡೆ ಖಂಡಿಸಿ, ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿರುವ ‘ಲೋಕತಂತ್ರ ಬಚಾವೋ’ ರ್‍ಯಾಲಿಯಲ್ಲಿ ದೆಹಲಿ ಸಿಎಂ ಪತ್ನಿ ಹೀಗೆ ಹೇಳಿದ್ದಾರೆ.

ಹಣ ಅಕ್ರಮ ವರ್ಗಾವಣೆ ಆರೋಪ ಸಂಬಂಧ ತಮ್ಮ ಪತಿ ಕೇಜ್ರಿವಾಲ್‌ ಬಂಧನ‌ದ ಕುರಿತು ಮಾತನಾಡಿದ ಸುನೀತಾ, ಭಾರತ ಮಾತೆ ನೋವಿನಲ್ಲಿದ್ದಾಳೆ, ಇಂತಹ ದೌರ್ಜನ್ಯಗಳು ಕೆಲಸಕ್ಕೆ ಬರುವುದಿಲ್ಲ. ನನ್ನ ಪತಿಗೆ ಸಾಕಷ್ಟು ಜನರ ಆಶೀರ್ವಾದವಿದೆ. ಅವರು ಸಿಂಹದಂತೆ, ಹೆಚ್ಚು ದಿನ ಜೈಲಿನಲ್ಲಿ ಇಡೋಕ್ಕಾಗಲ್ಲ ಎಂದಿದ್ದಾರೆ.

ದೆಹಲಿ ಜನರು ಕಳೆದ 75 ವರ್ಷಗಳಿಂದ ಅನ್ಯಾಯಕ್ಕೊಳಗಾಗಿದ್ದಾರೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೇರಿದರೆ, ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದೂ ಸುನೀತಾ ಹೇಳಿದರು.

ಅರವಿಂದ ಕೇಜ್ರಿವಾಲ್‌ ಬರೆದ ಸಂದೇಶವನ್ನು ಇದೇ ವೇಳೆ ಸುನೀತಾ ಓದಿದರು. ನನ್ನ ಪ್ರೀತಿಯ ಭಾರತೀಯರೇ, ನೀವೆಲ್ಲರೂ ದಯವಿಟ್ಟು ನಿಮ್ಮ ಈ ಮಗನ ಶುಭಾಶಯಗಳನ್ನು ಸ್ವೀಕರಿಸಿ. ನಾನು ಮತ ಕೇಳುತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಯಾರನ್ನೂ ಸೋಲಿಸುವ ಬಗ್ಗೆ ಮಾತನಾಡುವುದಿಲ್ಲ. ನಾನು ಭಾರತವನ್ನು ನವ ಭಾರತ ಮಾಡುವ ಬಗ್ಗೆ ಮಾತನಾಡುತ್ತಿದ್ದೇನೆ. ನಮ್ಮ ದೇಶವು ಎಲ್ಲವನ್ನೂ ಹೊಂದಿದೆ. ನಾನು ಜೈಲಿನಲ್ಲಿದ್ದೇನೆ, ಇಲ್ಲಿ ನನಗೆ ಯೋಚಿಸಲು ಸಾಕಷ್ಟು ಸಮಯ ಸಿಗುತ್ತಿದೆ. ಭಾರತ ಮಾತೆಯ ಬಗ್ಗೆ ಯೋಚಿಸುತ್ತಿದ್ದೇನೆ, ಜನರಿಗೆ ಉತ್ತಮ ಶಿಕ್ಷಣ ಸಿಗದಿದ್ದಾಗ, ಸರಿಯಾದ ಚಿಕಿತ್ಸೆ ಇಲ್ಲದಿರುವಾಗ, ವಿದ್ಯುತ್ ಕಡಿತ ಸಂಭವಿಸಿದಾಗ, ರಸ್ತೆಗಳು ಹಾಳಾದಾಗ ಭಾರತ ಮಾತೆ ನೋವಾಗುತ್ತದೆ ಎಂದು ಕೇಜ್ರಿವಾಲ್ ಪತ್ರದಲ್ಲಿ ತಿಳಿಸಿದ್ದಾರೆ.

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೇರಿದರೆ, ಉತ್ತಮ ಆಸ್ಪತ್ರೆಗಳು, ಅತ್ಯುತ್ತಮ ಶಿಕ್ಷಣ ಸೇರಿದಂತೆ ಆರು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು. ಮೈತ್ರಿಕೂಟಕ್ಕೆ ಅವಕಾಶ ನೀಡಿದರೆ, ಶ್ರೇಷ್ಠ ಭಾರತ ನಿರ್ಮಾಣ ಮಾಡಲಾಗುವುದು ಎಂದು‌‌‌ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಎಎಪಿ ನಾಯಕರೂ ಆಗಿರುವ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌, ಎನ್‌ಸಿಪಿ (ಶರದ್‌ಚಂದ್ರ ಪವಾರ್‌) ಪಕ್ಷದ ನಾಯಕ ಶರದ್‌ ಪವಾರ್‌, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ಜಾರ್ಖಂಡ್‌ ಮುಖ್ಯಮಂತ್ರಿ ಚಂಪೈ ಸೊರೇನ್‌ ಸೇರಿದಂತೆ ಹಲವರು ರ್‍ಯಾಲಿಯಲ್ಲಿ ಭಾಗವಹಿಸಿದ್ದಾರೆ.

Join Whatsapp
Exit mobile version