ಕೆಸಿಎಫ್ ಸಹಕಾರದಿಂದ 14 ವರ್ಷಗಳ ಬಳಿಕ ಊರಿಗೆ ತಲುಪಿದ ಕಿರಣ್

Prasthutha|

ದಮ್ಮಾಮ್: ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕನ ಸುಳ್ಳು ದೂರಿನಿಂದಾಗಿ 14 ವರ್ಷಗಳಿಂದ ಊರಿಗೆ ಮರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಮಂಗಳೂರು ಮೂಲದ ಕಿರಣ್ ಎಂಬವರನ್ನು ಕೆಸಿಎಫ್ ಸದಸ್ಯರು ತಾಯ್ನಾಡಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ ಜೆಪ್ಪು ಮೂಲದ ಕಿರಣ್ ಎಲ್ಲಾ ಅಡೆತಡೆಗಳನ್ನು ಮೀರಿ ಆಗಸ್ಟ್ 21ರಂದು ಮನೆಗೆ ತಲುಪಿದ್ದಾರೆ.


ಘಟನೆಯ ವಿವರ:
ಮಂಗಳೂರಿನ ಜೆಪ್ಪು ಮೂಲದ ಕಿರಣ್ ಎಂಬವರು 2006ರಲ್ಲಿ ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿರುವ ಸೂಪರ್ ಮಾರ್ಕೆಟ್ ಒಂದಕ್ಕೆ ಕ್ಯಾಷರ್ ಆಗಿ ಕೆಲಸಕ್ಕೆ ಸೇರಿಕೊಂಡು, ಊರಿನಲ್ಲಿರುವ ಕಷ್ಟಗಳಿಂದಾಗಿ ಸುಮಾರು 6 ವರ್ಷಗಳ ವರೆಗೆ ಊರಿಗೆ ಹೋಗದೆ ಕೆಲಸ ಮಾಡಿದ್ದರು. 6 ವರ್ಷದ ಬಳಿಕ ತಾನು ಊರಿಗೆ ಹೋಗಲು ಮಾಲಿಕರಲ್ಲಿ ಅನುಮತಿ ಕೇಳಿದಾಗ ಕೆಲವೊಂದು ಕಾರಣಗಳನ್ನು ಹೇಳಿ ಊರಿಗೆ ಹೋಗಲು ಅನುಮತಿ ನೀಡಿರಲಿಲ್ಲ. ನಂತರ ಕೆಲವು ತಿಂಗಳ ಬಳಿಕ ತಾನು ಊರಿಗೆ ಹೋಗಲೇ ಬೇಕು ಎಂದು ಪಟ್ಟು ಹಿಡಿದಾಗ ಸೂಪರ್ ಮಾರ್ಕೆಟ್ ಮಾಲೀಕರು ಕಿರಣ್ ವಿರುದ್ಧ 10 ಲಕ್ಷ ರಿಯಾಲ್ ಕಳ್ಳತನ ಮಾಡಿದ್ದಾನೆ ಎಂಬ ದೂರು ದಾಖಲಿಸುತ್ತಾರೆ.

- Advertisement -


ಈ ದೂರು ಪೊಲೀಸ್ ಸ್ಟೇಷನ್ ಹಾಗೂ ನ್ಯಾಯಾಲಯದಲ್ಲಿ ಒಂದೂವರೆ ವರ್ಷಗಳ ಕಾಲ ತನಿಖೆ ನಡೆಸಿ ಕಿರಣ್ ರವರನ್ನು ನಿರಪರಾಧಿ ಎಂದು ತೀರ್ಪು ನೀಡುತ್ತಾರೆ. ಈ ತೀರ್ಪು ಬಂದ ಆರು ತಿಂಗಳ ಬಳಿಕ ಪುನಃ ಊರಿಗೆ ಹೋಗುವ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರು ಅದೇ ಕೇಸನ್ನು ಮತ್ತೊಮ್ಮೆ ತನಿಖೆ ನಡೆಸಲು ಮನವಿ ಮಾಡಿದರು.


ಈ ವಿಷಯ ತಿಳಿದ ಕಿರಣ್ ರವರು ಹೇಗಾದರೂ ಮಾಡಿ ಊರಿಗೆ ಹೋಗಬೇಕು ಎಂಬ ಆಸೆಯಿಂದ ಬಹರೈನ್ ಮೂಲಕ ಊರಿಗೆ ಹೋಗುವ ಪ್ರಯತ್ನ ಮಾಡುವ ವೇಳೆ ಕೆಲವು ನಿಯಮ ತೊಂದರೆಗಳಿಂದಾಗಿ ಒಂದು ವರ್ಷಗಳ ಕಾಲ ಮತ್ತೆ ಸೌದಿಯಲ್ಲಿಯೇ ಸಿಲುಕಿಕೊಂಡರು. ಈ ತೊಂದರೆ ಪರಿಹಾರವಾದ ಬಳಿಕ ತನ್ನನ್ನು ಊರಿಗೆ ಕಳುಹಿಸುವಂತೆ ಎಷ್ಟೇ ಕೇಳಿಕೊಂಡರು ಅವರು ಸಮ್ಮತಿಸಲಿಲ್ಲ. ಹಲವಾರು ಸಂಘಟನೆಗಳೂ ಇದಕ್ಕೆ ಬೇಕಾಗಿ ಕಷ್ಟಪಟ್ಟರೂ ಪ್ರಯೋಜನವಾಗಲಿಲ್ಲ. ಕೊನೆಗೆ ಬೇರೊಬ್ಬ ಮೂಲಕ ಈ ವಿಷಯ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾದ ಸಾಂತ್ವನ ಇಲಾಖೆಯ ಅಧ್ಯಕ್ಷ ಮುಹಮ್ಮದ್ ಮಲೆಬೆಟ್ಟುರವರ ಗಮನಕ್ಕೆ ಬರುತ್ತದೆ.


ಮುಹಮ್ಮದ್ ಮಲೆಬೆಟ್ಟುರವರ ಗಮನಕ್ಕೆ ಬಂದ ನಂತರ ಇವರು ಇದರ ಹಿಂದೆ ಎರಡು ತಿಂಗಳುಗಳ ಕಾಲ ಸತತ ಪ್ರಯತ್ನ ಮಾಡಿ ಕಂಪನಿಯ ಮಾಲಿಕರಲ್ಲಿ ಮಾತುಕತೆ ನಡೆಸಿ ಅದಕ್ಕೆ ಪರಿಹಾರ ಕಂಡ ಬಳಿಕ ಪೋಲಿಸ್ ಸ್ಟೇಷನ್ ಹಾಗೂ ಕೋರ್ಟ್ ನಲ್ಲಿದ್ದ ಕೇಸ್ ಗಳಿಗೆ ಸರಿಯಾದ ದಾಖಲೆಗಳನ್ನು ನೀಡಿ ಊರಿಗೆ ಹೋಗಲಿರುವ ದಾರಿಯನ್ನು ಸರಿಪಡಿಸುವಲ್ಲಿ ಯಶಸ್ವಿಯಾದರು. ಎಲ್ಲಾ ದಾಖಲೆಗಳು ಸರಿಯಾದ ನಂತರ ದಮ್ಮಾಮಿನಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಅಸೋಸಿಯೇಷನ್ (MASA) ರವರ ಸಹಕಾರದಿಂದ ಇವರಿಗೆ ವಿಮಾನಯಾನ ಟಿಕೇಟ್ ನೀಡಿ ಆಗಸ್ಟ್ 21ರಂದು ಬೆಳಿಗ್ಗೆ ಕಿರಣ್ ಮನೆಗೆ ತಲುಪಿದ್ದಾರೆ.

- Advertisement -