►‘ಈ ಚಿತ್ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸೂಕ್ತವಾದುದಲ್ಲ’
ಪಣಜಿ: ವಿವಾದಿತ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ವಿರುದ್ಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಪ್ರಚಾರದ ಉದ್ದೇಶಕ್ಕಾಗಿ ನಿರ್ಮಿಸಿದ ಚಿತ್ರ ಎಂದು ಹೇಳಿದ್ದಾರೆ.
‘ಕಾಶ್ಮೀರ್ ಫೈಲ್ಸ್’ ಅಸಭ್ಯ, ಕೀಳು ಅಭಿರುಚಿಯ ಚಿತ್ರ. ಪ್ರಚಾರದ ಉದ್ದೇಶಕ್ಕಾಗಿ ನಿರ್ಮಿಸಲಾದ ಈ ಚಿತ್ರವು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸೂಕ್ತವಾದುದಲ್ಲ’ ಎಂದು ಐಎಫ್ಎಫ್ಐ ಅಂತರರಾಷ್ಟ್ರೀಯ ಸ್ಪರ್ಧೆ ವಿಭಾಗದ ತೀರ್ಪುಗಾರರಾದ ನಾಡವ್ ಲ್ಯಾಪಿಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂಭತ್ತು ದಿನಗಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕಡೆಯ ದಿನವಾದ ಸೋಮವಾರ ಮಾತನಾಡಿದ ಲ್ಯಾಪಿಡ್, ‘ಸ್ಪರ್ಧೆಗೆ ಬಂದಿದ್ದ 15ರಲ್ಲಿ 14ಕ್ಕೆ ಚಲನಚಿತ್ರದ ಲಕ್ಷಣಗಳಿವೆ. 15ನೇ ಚಿತ್ರ, ‘ಕಾಶ್ಮೀರ್ ಫೈಲ್ಸ್’ ವೀಕ್ಷಣೆಯ ನಂತರ ನಾವು ದಿಗ್ಭ್ರಮೆಗೊಂಡಿದ್ದು, ವಿಚಲಿತರಾದೆವು. ಇದು, ಇಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಸೂಕ್ತವಾದ ಚಿತ್ರವಲ್ಲ. ಇದು ಪ್ರಚಾರದ ಉದ್ದೇಶದ, ಅಸಭ್ಯ ಚಿತ್ರ’ ಎಂದು ಹೇಳಿದರು.