► ಸರ್ವೇ ವೆಚ್ಚ ಉ. ಪ್ರ. ಸರಕಾರ ಭರಿಸಬೇಕೆಂದ ಕೋರ್ಟ್
ವಾರಣಾಸಿ : ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಸಿವಿಲ್ ನ್ಯಾಯಾಲಯವು ಕಾಶಿ ವಿಶ್ವನಾಥ ದೇವಾಲಯ-ಜ್ಞಾನವಾಪಿ ಮಸೀದಿಯ ವಿವಾದಿತ ಸ್ಥಳದಲ್ಲಿ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಅನುಮತಿ ನೀಡಿದೆ. ಸಮೀಕ್ಷೆಯ ವೆಚ್ಚವನ್ನು ಭರಿಸುವಂತೆ ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
“ಅಲ್ಲಿ ಯಾವುದೇ ಇತರ ಧಾರ್ಮಿಕ ರಚನೆಯೊಂದಿಗೆ ಒಂದರ ಮೇಲೊಂದು ರಚಿಸಲ್ಪಟ್ಟಿದೆಯೇ, ಅದರಲ್ಲಿ ಯಾವುದಾದರೂ ಬದಲಾವಣೆ ಆಗಿದೆಯೇ ಅಥವಾ ಇರುವ ರಚನೆಗೆ ಸೇರ್ಪಡೆ ಮಾಡಲಾಗಿದೆಯೇ ” ಎಂದು ಕಂಡುಹಿಡಿಯಲು ಸಮೀಕ್ಷೆ ಯನ್ನು ಮಾಡುವಂತೆ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಿದೆ.
ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರ ಅವರ ಪರವಾಗಿ ವಕೀಲ ವಿಜಯ್ ಶಂಕರ್ ರಸ್ತೋಗಿ ಅವರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಬೆಳವಣಿಗೆ ನಡೆದಿದೆ. ಮಸೀದಿಯನ್ನು ನಿರ್ಮಿಸಿರುವ ಭೂಮಿ ಹಿಂದೂಗಳಿಗೆ ಸೇರಿದ್ದು ಎಂದು ಅರ್ಜಿದಾರರು ವಾದಿಸಿದ್ದರು. ಸದರಿ ಭೂಮಿಯಲ್ಲಿ ಹಿಂದೂಗಳು ತಮ್ಮ ದೇವಾಲಯವನ್ನು ಪುನರ್ನಿರ್ಮಿಸುವ ಮತ್ತು ಪೂಜಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಘೋಷಿಸುವಂತೆ ನ್ಯಾಯಾಲಯವನ್ನು ಕೋರಿದ್ದರು.
ಗಮನಾರ್ಹ ವಿಚಾರವೇನೆಂದರೆ, ಈ ಭೂ ವಿವಾದವು ಕಾಶಿ ವಿಶ್ವನಾಥ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಲಾದ ಮಸೀದಿಗೆ ಸಂಬಂಧಿಸಿದ್ದಾಗಿದೆ. ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಮಸೀದಿಯನ್ನು ಸದರಿ ದೇವಾಲಯದ ಒಂದು ಭಾಗವನ್ನು ಕೆಡವಿದ ನಂತರ ನಿರ್ಮಿಸಲಾಗಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಮೊದಲು ಸಲ್ಲಿಸಿದ್ದ ಅರ್ಜಿಯಲ್ಲಿ, ಹಿಂದೂಗಳು ಈ ಸ್ಥಳವನ್ನು ಶಾಂತಿಯುತವಾಗಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಮುಸ್ಲಿಂ ಸಮುದಾಯ ಹಸ್ತಕ್ಷೇಪ ಮಾಡದಂತೆ ನಿಷೇಧಾಜ್ಞೆಯನ್ನು ಹೇರುವಂತೆ ಕೋರಲಾಗಿದೆ. ಇದನ್ನು ಮಸೀದಿ ನಿರ್ವಹಣಾ ಸಮಿತಿಯಾಗಿರುವ ಅಂಜುಮನ್ ಇಂತೆಝಾಮಿಯಾ ಮಸಾಜಿದ್ ವಿರೋಧಿಸಿತ್ತು.
ಬಾಬರಿ ಮಸೀದಿಯ ಬಳಿಕ ಕಾಶೀ ಮಥುರಾ ನಮ್ಮ ಮುಂದಿನ ನಡೆ ಎಂದು ಹೇಳುತ್ತಲೇ ಇದ್ದ ಸಂಘಪರಿವಾರ ಇದೀಗ ತಮ್ಮ ಅಜೆಂಡಾವನ್ನು ಕಾಶೀ ಮಸೀದಿಗೂ ವ್ಯಾಪಿಸುತ್ತಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇದೇ ರೀತಿಯ ವಾದವನ್ನು ಮುಂದಿರಿಸಿಕೊಂಡು ಬಾಬರಿ ಮಸೀದಿಯನ್ನು 1992 ರಲ್ಲಿ ಸಂಘಪರಿವಾರ ಕೆಡವಿ ಹಾಕಿತ್ತು. ದಶಕಗಳ ಕಾನೂನು ಹೋರಾಟದ ಬಳಿಕ ಪೂರಕ ಸಾಕ್ಷ್ಯಗಳೆಲ್ಲವೂ ಮಸೀದಿಯ ಪರವಾಗಿದ್ದರೂ, ಸುಪ್ರೀಮ್ ಕೋರ್ಟ್ ಮಂದಿರ ನಿರ್ಮಾಣ ಮಾಡುವಂತೆ ವಿಚಿತ್ರ ತೀರ್ಪು ನೀಡಿತ್ತು. ತೀರ್ಪು ನೀಡಿದ ಸುಪ್ರೀಮ್ ಮುಖ್ಯ ನ್ಯಾಯಧೀಶ ರಂಜನ್ ಗೊಗೋಯಿ ಈಗ ಬಿಜೆಪಿಯ ಸಂಸದರಾಗಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ. ಬಾಬರಿ ಮಸೀದಿ ಪ್ರಕರಣದಲ್ಲೂ ಪುರಾತತ್ವ ಇಲಾಖೆಯ ಪಾತ್ರ ಬಹಳಷ್ಟಿತ್ತು ಎನ್ನುವುದು ಪ್ರಮುಖವಾದ ಬೆಳವಣಿಗೆಯಾಗಿದೆ.