ಕಾಸರಗೋಡು: ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಬಳಸುವವರನ್ನು ತಮ್ಮ ಜಮಾಅತ್‌ನ ಪ್ರಾಥಮಿಕ ಸದಸ್ಯತ್ವದಿಂದ ಹೊರಗಿಡಲಾಗುವುದು ಎಂಬ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಕಾಞಂಗಾಡ್ ಪಡನ್ನಕ್ಕಾಡ್ ಮುಹಿಯುದ್ದೀನ್ ಜುಮಾ ಮಸೀದಿಯ ಮೊಹಲ್ಲಾ ಕಮಿಟಿ ಮಾದರಿಯಾಗಿದೆ.
ಜಮಾಅತ್‌ಗೆ ಒಳಪಟ್ಟ ಸುಮಾರು 580 ಕುಟುಂಬಗಳಿದ್ದು, ಪ್ರಾಥಮಿಕ ಸದಸ್ಯತ್ವಕ್ಕೆ ಅನರ್ಹರಾದವರ ವಿವಾಹ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಮಸೀದಿಯ ಕಮಿಟಿ ಯಿಂದ ಯಾವುದೇ ರೀತಿಯ ಸಹಕಾರ ನೀಡಲಾಗುವುದಿಲ್ಲ ಎಂದು ತಿಳಿಸಿದೆ.
ಮಾದಕ ವಸ್ತುಗಳ ದುಷ್ಪರಿಣಾಮ, ಜಾಗೃತಿ ಶಿಬಿರಗಳನ್ನು ನಡೆಸುತ್ತಿರುವ ಪಡನ್ನಕ್ಕಾಡ್ ಮೊಹಲ್ಲಾ ಗೆ ಭೇಟಿ ನೀಡಿ ಅಭಿನಂದಿಸಿರುವ ಕಾಸರಗೋಡು ಜಿಲ್ಲಾ ಪೊಲೀಸ್, ಕಾಞಂಗಾಡ್ ಡಿವೈಎಸ್ಪಿ ಹಾಗೂ ಅಧಿಕಾರಿಗಳು ಮೊಹಲ್ಲಾ ಕಮಿಟಿಯ ಈ ತೀರ್ಮಾನಕ್ಕೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
‘ಕ್ಲೀನ್ ಕಾಸರಗೋಡು ಎಂಬ ಹೆಸರಿನಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿ ಡಾ. ವೈಭವ್ ಸಕ್ಸೇನಾ ಐಪಿಎಸ್ ಅವರ ನೇತೃತ್ವದ ಅಧಿಕಾರಿಗಳ ತಂಡವೊಂದು ” ಕಾರ್ಯಾರಣೆ ನಡೆಸುತ್ತಿದೆ. ಇದು ಮಾದಕ ವಸ್ತುಗಳನ್ನು ಉಪಯೋಗಿಸುತ್ತಿರುವವರ ವಿರುದ್ಧ ನಡೆಸುತ್ತಿರುವಂತಹ ಕಾರ್ಯಾಚರಣೆಯಾಗಿದೆ.
ಪಡನ್ನಕ್ಕಾಡ್ ಮೊಹಲ್ಲಾ ಕಮಿಟಿಯ ಈ ತೀರ್ಮಾನವು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.