ಕಾಸರಗೋಡು: ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್(85) ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮ ಪಂಚಾಯತಿನ ಕಿಳಿಂಗಾರು ಗ್ರಾಮದಲ್ಲಿ ಕೃಷ್ಣ ಭಟ್ ಮತ್ತು ಸುಬ್ಬಮ್ಮ ದಂಪತಿಗಳ ಕಿರಿಯ ಪುತ್ರನಾಗಿ 17 ಜುಲೈ 1937ರಂದು ಜನಿಸಿದ ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್ ಇವರು ಜನಮಾನಸದಲ್ಲಿ ಕೊಡುಗೈ ದಾನಿ ಎಂದೇ ಗುರುತಿಸಲ್ಪಟ್ಟಿದ್ದರು. ಗೋಪಾಲಕೃಷ್ಣ ಭಟ್ ಸರಳ ವ್ಯಕ್ತಿಯಾಗಿದ್ದು, ತಾವು ಉಳಿಸಿದ ಹಣದಿಂದ ಸಾವಿರಾರು ಜನರಿಗೆ ಸಹಾಯ ಮಾಡಿ ಪ್ರಸಿದ್ಧರಾಗಿದ್ದರು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದಭಾವ ತೋರದ ಇವರು, 50 ಸೆಂಟ್ಸ್ ಗಿಂತ ಕಡಿಮೆ ಸ್ಥಳವಿರುವ ಮತ್ತು ಶಾಶ್ವತ ಉದ್ಯೋಗವಿರದ 265 ಬಡವರಿಗೆ ಮನೆ ನಿರ್ಮಿಸಿಕೊಟ್ಟಿದ್ದರು.
ಸುಮಾರು 45 ವರ್ಷಗಳ ಹಿಂದೆ ಪತ್ನಿ ಸಮೇತರಾಗಿ ಕಾಶಿಯಾತ್ರೆ ಕೈಗೊಳ್ಳಲು ಮುಂದಾಗಿದ್ದರು. ಆ ಸಮಯದಲ್ಲಿ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡ ಸಮೀಪದ ಮುಸ್ಲಿಂ ಕುಟುಂಬವೊಂದರ ದಯನೀಯ ಸ್ಥಿತಿ ಕಂಡು ಮರುಗಿದ ಇವರು ಕಾಶೀಯಾತ್ರೆಯನ್ನೇ ರದ್ದುಗೊಳಿಸಿ, ಆ ದುಡ್ಡಿನಲ್ಲಿ ಉಚಿತವಾಗಿ ಮನೆ ಕಟ್ಟಿಕೊಟ್ಟಿದ್ದರು.