Home ಟಾಪ್ ಸುದ್ದಿಗಳು ಕಾರವಾರ | ನೌಕಾನೆಲೆಯ ಮಾಹಿತಿ ರವಾನೆ ಆರೋಪ : NIA ದಾಳಿ, ಮೂವರ ವಿಚಾರಣೆ

ಕಾರವಾರ | ನೌಕಾನೆಲೆಯ ಮಾಹಿತಿ ರವಾನೆ ಆರೋಪ : NIA ದಾಳಿ, ಮೂವರ ವಿಚಾರಣೆ

ಕಾರವಾರ: ನೌಕಾನೆಲೆ ಸುರಕ್ಷತೆಗೆ ಸಂಬಂಧಿಸಿದಂತೆ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಬುಧವಾರ ನೌಕಾನೆಲೆಯ ಸುತ್ತ ವಿವಿಧೆಡೆ ದಾಳಿ ಮಾಡಿ ಮೂವರು ದಿನಗೂಲಿ ಕಾರ್ಮಿಕರ ವಿಚಾರಣೆ ನಡೆಸಿದ್ದಾರೆ ಎಂದು ತಡವಾಗಿ ಬೆಳಕಿಗೆ ಬಂದಿದೆ.

ನೌಕಾನೆಲೆಗೆ ಹೊಂದಿಕೊಂಡಿರುವ ಮುದಗಾ ನಿರಾಶ್ರಿತರ ಕಾಲನಿಯ ವೇತನ್ ತಾಂಡೇಲ್, ತೋಡೂರು ಲೇಬರ್ ಕಾಲನಿಯ ಸುನೀಲ್ ನಾಯ್ಕ್ ಮತ್ತು ಹಳಹಳ್ಳಿಯ ಅಕ್ಷಯ ನಾಯ್ಕ ಅವರ ಮನೆ ಮೇಲೆ ದಾಳಿ ಮಾಡಿ ವಿಚಾರಣೆ ಮಾಡಿದ್ದು, ಒಬ್ಬನನ್ನು ಗೋವಾ ಮತ್ತು ಇನ್ನಿಬ್ಬರನ್ನು ಕಾರವಾರದಲ್ಲಿ ವಿಚಾರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವಿಶಾಖಪಟ್ಟಣಂನಲ್ಲಿ ನಡೆದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಡಿವೈಎಸ್ ಪಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಮೂವರು ಆರೋಪಿಗಳ ಪೈಕಿ ಒಬ್ಬ ನೌಕಾನೆಲೆ ದಿನಗೂಲಿ ಕೆಲಸ ಬಿಟ್ಟು ಗೋವಾದಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಆತನನ್ನು ವಿಚಾರಣೆ ನಡೆಸಿದ್ದಾರೆ. ನೌಕಾನೆಲೆಯ ಗೌಪ್ಯ ಸಂಗತಿಗಳ ಫೋಟೋ, ವಿಡಿಯೋವನ್ನು ಬಹಿರಂಗ ಮಾಡಿದ ಆರೋಪದ ಮೇಲೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ವಿದೇಶಿ ಅಧಿಕಾರಿಗಳಿಗೆ ಇಲ್ಲಿನ ನೌಕಾನೆಲೆ ಮಾಹಿತಿ ರವಾನಿಸುತ್ತಿದ್ದರು ಎನ್ನುವ ಆರೋಪದಡಿ ವಿಶಾಖಪಟ್ಟಣಂನಲ್ಲಿ 2023ರಲ್ಲಿ ದೀಪಕ್ ಎಂಬಾತ ಸೇರಿ ಕೆಲವರನ್ನು ಎನ್‌ ಐಎ ಬಂಧಿಸಿತ್ತು. ಆ ಆರೋಪಿಗಳ ವಿಚಾರಣೆ ವೇಳೆ ಸುನೀಲ್‌ ನಾಯ್ಕ್, ವೇತನ ತಾಂಡೇಲ ಹಾಗೂ ಅಕ್ಷಯ ನಾಯ್ಕ ಹೆಸರು ಬಹಿರಂಗವಾಗಿದೆ. ಇವರು ಕದಂಬ ನೌಕಾನೆಲೆ ಫೋಟೊ, ಇತರ ಮಾಹಿತಿಗಳನ್ನು ದೀಪಕ್ ಮತ್ತಿತರಿಗೆ ಕಳುಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

Join Whatsapp
Exit mobile version