ಬೆಂಗಳೂರು: ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳ್ಳುವವರೆಗೆ ಪೊಲೀಸರು ಪ್ರಕರಣದ ತನಿಖೆಯ ಕುರಿತಾಗಿ ಅದರ ಆರೋಪಿಗಳು ಅಥವಾ ಸಂತ್ರಸ್ತರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ. ಈ ಸಂಬಂಧ ನಾಲ್ಕು ವಾರಗಳಲ್ಲಿ ಮಾರ್ಗಸೂಚಿ, ನಿರ್ದೇಶನಗಳನ್ನು ರೂಪಿಸುವಂತೆಯೂ ಅದು ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ನಿಯಮ ಉಲ್ಲಂಘಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಿದೆ.
“ತನಿಖೆ ಪೂರ್ಣಗೊಳ್ಳುವ ಮೊದಲು ಅದರ ಸ್ವರೂಪವನ್ನು ತನಿಖಾಧಿಕಾರಿಗಳು ಬಹಿರಂಗಪಡಿಸದಂತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಮಗ್ರ ನಿರ್ದೇಶನ ನೀಡಬೇಕು ಎಂಬುದು ನಮ್ಮ ನಿಲುವು. ದೂರುದಾರರು ಮತ್ತು ಆರೋಪಿಗಳ ಕುರಿತು ಕೂಡ ಅವರು ಮಾಹಿತಿ ನೀಡುವಂತಿಲ್ಲ ಎನ್ನುವುದು ಇನ್ನೊಂದು ನಿರ್ದೇಶನವಾಗಿದೆ. ನಿರ್ದೇಶನ ನೀಡಿದ ಮಾತ್ರಕ್ಕೆ ಉದ್ದೇಶ ಪೂರ್ಣಗೊಂಡಂತಾಗುವುದಿಲ್ಲ. (ನಿಯಮ) ಉಲ್ಲಂಘನೆಗಾಗಿ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ. ಈ ಸಂಬಂಧ ನಾಲ್ಕು ವಾರಗಳಲ್ಲಿ ಮಾರ್ಗಸೂಚಿ, ನಿರ್ದೇಶನಗಳನ್ನು ರೂಪಿಸುವಂತೆ ಅದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸುದ್ದಿ ಅಥವಾ ಇನ್ನಾವುದೇ ಕಾರ್ಯಕ್ರಮದ ಭಾಗವಾಗಿ ಅಸಭ್ಯ ಮತ್ತು ಅಶ್ಲೀಲ ವಿಚಾರ ಪ್ರಕಟಿಸುವುದಕ್ಕೆ ತಡೆ ನೀಡಲು ಶಾಸನಬದ್ಧ ನಿಯಮ ರೂಪಿಸಲು ನಿರ್ದೇಶನ ನೀಡಬೇಕೆಂದು ಕೋರಿ ವಕೀಲೆ ದೀಪಶ್ರೀ ಅವರು ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶ ಜಾರಿಗೊಳಿಸಲಾಗಿದೆ