Home ಟಾಪ್ ಸುದ್ದಿಗಳು ರಾಜ್ಯ ಗುತ್ತಿಗೆದಾರರ ಸಂಘದಿಂದ ಇಂದು ಸುದ್ದಿಗೋಷ್ಠಿ

ರಾಜ್ಯ ಗುತ್ತಿಗೆದಾರರ ಸಂಘದಿಂದ ಇಂದು ಸುದ್ದಿಗೋಷ್ಠಿ

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ಸಂಘ ಸಚಿವರ ವಿರುದ್ಧ ಕಮಿಷನ್​​ ಆರೋಪ ಮಾಡಿದೆ. ಇದರ ಮಧ್ಯೆ ರಾಜ್ಯ ಗುತ್ತಿಗೆದಾರರ ಸಂಘವೂ ಇಂದು (ಆಗಸ್ಟ್ 11) ಮಹತ್ವದ ಸುದ್ದಿಗೋಷ್ಠಿ ಕರೆದಿದೆ.

 ಇಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ, ಅಂದು ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರವೇ ಗುತ್ತಿಗೆದಾರರ ಬಾಕಿ ಬಿಲ್​ ಪಾವತಿಸದೇ ಪೆಂಡಿಂಗ್ ಇಟ್ಟಿದೆ ಎಂಬ ಆರೋಪ ಇದೆ. ಹೀಗಾಗಿ ಈ ಬಗ್ಗೆ ಕೆಂಪಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಏನು ಹೇಳುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.​

ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಅಂತಾ ಕಾಂಗ್ರೆಸ್ ದೊಡ್ಡ ಸಮರವನ್ನೇ ಸಾರಿತ್ತು. ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಅಧಿಕಾರಕ್ಕೆ ಬಂದ ಬೆನ್ನಲ್ಲೇ ಎಸ್ಐಟಿ ರಚನೆ ಮಾಡಿ ನಕಲಿ ಕಾಮಗಾರಿಗಳ ತನಿಖೆಗೆ ಮುಂದಾಗಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಗುತ್ತಿಗೆದಾರರಿಂದ ಲಂಚದ ಬಾಂಬ್ ಸ್ಫೋಟಗೊಂಡಿದೆ. ಬಾಕಿ ಹಣ ಬಿಡುಗಡೆ ಮಾಡೋದಕ್ಕೆ ಡಿ.ಕೆ.ಶಿವಕುಮಾರ್ 15ಪರ್ಸೆಂಟ್ ಕಮಿಷನ್‌ಗಾಗಿ ಡಿಮ್ಯಾಂಡ್ ಇಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕೆಲ ಬಿಬಿಎಂಪಿ ಗುತ್ತಿಗೆದಾರರು ಈ ಆರೋಪ ಮಾಡಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಅವರ ತಂಡ ಈ ಸಂಬಂಧ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ದೂರಿನ ಬೆನ್ನಲ್ಲೇ ನಿನ್ನೆ ಸಂಜೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್‌ಗೆ ರಾಜ್ಯಪಾಲರು ಬುಲಾವ್ ನೀಡಿದ್ರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಬಿಬಿಎಂಪಿ ಆಯುಕ್ತರನ್ನು ಕರೆಸಿಕೊಂಡು ಸ್ಪಷ್ಟನೆ ಪಡೆದಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 5000 ಕೋಟಿ ರೂಪಾಯಿ ಬಿಲ್​ ಬಾಕಿ ಇದೆಯಂತೆ. ಸರ್ಕಾರ ಅನುದಾನದ ನಗರೋತ್ಥಾನ, ಟೆಂಡರ್ ಶ್ಯೂರ್, SWM, ಬಿಬಿಎಂಪಿಯ ವಾರ್ಡ್ ವರ್ಕ್ಸ್ ಸೇರಿದಂತೆ ಹಲವು ಕಾಮಗಾರಿಗಳ ಬಿಲ್ ಬಾಕಿ ಇದೆ. ಬಿಲ್​ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದೆಯಂತೆ..ಸದ್ಯ ಸುಮಾರು 670 ಕೋಟಿ ಹಣವನ್ನು ಬಿಬಿಎಂಪಿ ಖಾತೆಗೆ ವರ್ಗಾವಣೆ ಮಾಡಿರುವ ಸರ್ಕಾರ, ಬಿಲ್ ಪಾವತಿಯನ್ನ ಮಾತ್ರ ತಡೆ ಹಿಡಿದಿದೆ. ಹೀಗಾಗಿ ಬಿಬಿಎಂಪಿ ಗುತ್ತಿಗೆದಾರರು ಇದೀಗ ನಮ್ಮ ಹಣವನ್ನ ಪಾವತಿಸಿ ಅಂತ ಹೋರಾಟಕ್ಕಿಳಿದಿದ್ದಾರೆ.

Join Whatsapp
Exit mobile version